ಕರಾವಳಿ

ಸುಳ್ಯ : ಪೊಲೀಸರ ಜೊತೆ ಅನುಚಿತ ವರ್ತನೆ: ಆರೋಪಿಗೆ ದಂಡದೊಂದಿಗೆ ಪೊಲೀಸ್ ಠಾಣೆ ಸ್ವಚ್ಛಗೊಳಿಸುವ ಶಿಕ್ಷೆ!



ಸುಳ್ಯ: ಕುಡಿದು ವಾಹನ ಚಲಾಯಿಸಿದ್ದಲ್ಲದೆ ಕರ್ತವ್ಯ ನಿರತ ಎಸ್.ಐ ಜತೆ ಅನುಚಿತವಾಗಿ ವರ್ತಿಸಿದ ಆರೋಪಿಗೆ ಸುಳ್ಯ ನ್ಯಾಯಾಲಯ ದಂಡದೊಂದಿಗೆ ಸಮುದಾಯ ಸೇವೆಯ ಶಿಕ್ಷೆಯನ್ನು ನೀಡಿ ಆದೇಶಿಸಿದೆ.

ಎ.22ರಂದು ರಾತ್ರಿ ಸಮವಸ್ತ್ರದಲ್ಲಿದ್ದ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರೊಂದಿಗೆ ಕೆ.ವಿ.ಜಿ. ಜಂಕ್ಷನ್ ಬಳಿ ಅನುಚಿತವಾಗಿ ವರ್ತಿಸಿದ್ದಲ್ಲದೆ ವಾಹನದ ದಾಖಲಾತಿಗಳನ್ನು ಹಾಜರು ಪಡಿಸದೆ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿಕೊಂಡು ಹೋದ ಪ್ರಕರಣದ ಆರೋಪಿ ಅಂಕಿತ್ ಪಲ್ಲಾಯ ಎಂಬವರ ಮೇಲೆ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.


ಈ ಪ್ರಕರಣದಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಹಿರಿಯ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಬಾಬು, ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ 10,000 ರೂ. ದಂಡ ಮತ್ತು ಸಮುದಾಯ ಸೇವೆಯ ಶಿಕ್ಷೆ ನೀಡಿ ಆದೇಶ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಅಪರಾಧಿಯು ಜು.19ರಿಂದ 28ರ ವರೆಗೆ ದಿನಂಪ್ರತಿ ಬೆಳಗ್ಗೆ 10 ರಿಂದ 12ರವರೆಗೆ ಸುಳ್ಯ ಪೊಲೀಸ್ ಠಾಣೆಯ ಆವರಣವನ್ನು ಶುಚಿ ಗೊಳಿಸುವ ಮೂಲಕ ಸಮುದಾಯ ಸೇವೆ ಮಾಡಲು ಆದೇಶ ನೀಡಲಾಗಿದೆ.
ಅಲ್ಲದೇ ಕಲಂ 179 ರ ಅಪರಾಧಕ್ಕಾಗಿ 2,000 ರೂ. ದಂಡ ವಿಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!