ರಾಜ್ಯ

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದ ಇಕ್ಬಾಲ್ ಹುಸೇನ್ ಗೆ ಶೋಕಾಸ್ ನೋಟೀಸ್

ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಹೇಳಿದ್ದ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಮಂಗಳವಾರ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡಿದ ಇಕ್ಬಾಲ್ ಹುಸೇನ್‍ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದು, ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ.


ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟು ಮಾಡುವಂತಹ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡಿದ್ದೀರಿ. ತಮ್ಮ ಈ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆ ಆಗಿರುತ್ತದೆ. ತಮ್ಮ  ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.



ಕಾಂಗ್ರೆಸ್ ಪಕ್ಷದೊಳಗೆ “ಅಸಮಾಧಾನ” ಮತ್ತು ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ  ಸಭೆ ನಡೆಸುತ್ತಿರುವ ಸಮಯದಲ್ಲೇ ಇಕ್ಬಾಲ್ ಹುಸೇನ್ ಅವರು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಉಳಿದ ಅವಧಿಗೆ ಡಿಕೆ ಶಿವಕುಮಾರ್ ಗೆ ಅವಕಾಶ ನೀಡಬೇಕು. ಇದು ನನ್ನೊಬ್ಬನ ಇಚ್ಚೆ ಅಲ್ಲ. ಸುಮಾರು 100 ಶಾಸಕರು ಸಿಎಂ ಬದಲಾವಣೆ ಪರವಾಗಿದ್ದು, ಈ ಕ್ಷಣಕ್ಕಾಗಿ ಅನೇಕ ಶಾಸಕರು ಕಾಯುತ್ತಿದ್ದಾರೆ, ಈಗ ಮುಖ್ಯಮಂತ್ರಿ ಬದಲಾವಣೆಯಾಗದಿದ್ರೆ ಮುಂದೆ ಕಷ್ಟವಾಗಲಿದೆಎಂದು ಇಕ್ಬಾಲ್ ಹುಸೇನ್ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!