ಬಂಟ್ವಾಳ: ಗಂಡ-ಹೆಂಡತಿಯ ಮೃತದೇಹ ಮನೆಯೊಳಗೆ ಪತ್ತೆ!
ಬಂಟ್ವಾಳ: ಗಂಡ-ಹೆಂಡತಿಯ ಮೃತದೇಹ ಪತ್ತೆಯಾಗಿದ್ದು, ಗಂಡ ನೇಣು ಬಿಗಿದ ಸ್ಥಿತಿಯಲ್ಲಿದ್ದು, ತುಂಬು ಗರ್ಭಿಣಿಯಾಗಿದ್ದ ಹೆಂಡತಿಯ ಮೃತದೇಹ ಮಲಗುವ ಕೋಣೆಯ ಬೆಡ್ಡಿನ ಕೆಳಗೆ ಪತ್ತೆಯಾದ ಘಟನೆ ಜೂ.19ರ ಗುರುವಾರ ನಾವೂರು ಗ್ರಾಮದ ಬಡಗುಂಡಿಎಂಬಲ್ಲಿ ನಡೆದಿದೆ.

ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಅವರ ಪತ್ನಿ ಜಯಂತಿ ಮೃತಪಟ್ಟವರು. ತಿಮ್ಮಪ್ಪ ಮೂಲ್ಯ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದು ಬಳಿಕ ತಾನು ಅಡುಗೆ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ತಿಮ್ಮಪ್ಪ ಅವರ ಮನೆ ಮಿತ್ತಮಜಲಿನಲ್ಲಿದ್ದು, ಪತ್ನಿಯ ಮನೆ ಬಡಗುಂಡಿಯಲ್ಲಿದೆ. ಇವರಿಗೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಪ್ರಸ್ತುತ ಪತ್ನಿ ಗರ್ಭಿಣಿಯಾಗಿದ್ದು, ಸೀಮಂತದ ದಿನಾಂಕವೂ ನಿಗದಿಯಾಗಿತ್ತು ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.