ಕ್ರೈಂರಾಷ್ಟ್ರೀಯ

ನವದಂಪತಿ ಹನಿಮೂನ್ ಗೆ  ಹೋಗಿ ನಾಪತ್ತೆ ಪ್ರಕರಣಕ್ಕೆ ಸ್ಪೋಟಕ ತಿರುವು 


ನವದಂಪತಿ ಹನಿಮೂನ್ ಗೆ ಹೋಗಿ ಪತಿ ಹೆಣವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.  ಮೇಘಾಲಯಕ್ಕೆ ಹನಿಮೂನ್ಗೆಂದು ತೆರಳಿ ದಂಪತಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಒಂದೆಡೆ ರಾಜಾ ರಘುವಂಶಿ ಕೊಲೆಯಾಗಿದೆ. ಮತ್ತೊಂದೆಡೆ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಸೋನಮ್ ರಘುವಂಶಿ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಕಳೆದ 17 ದಿನಗಳಿಂದ ಪೊಲೀಸರು ಮೇಘಾಲಯದಲ್ಲಿ ಸೋನಮ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.



ಸೋನಮ್ ನಿನ್ನೆ ರಾತ್ರಿ ತನ್ನ ಕುಟುಂಬಕ್ಕೆ ಕರೆ ಮಾಡಿ ತಾನು ಯುಪಿಯ ಘಾಜಿಪುರ ಜಿಲ್ಲೆಯಲ್ಲಿದ್ದೇನೆ ಎಂದು ತಿಳಿಸಿದ್ದಾಳೆ. ಸೋನಮ್ ತನ್ನ ಸಹೋದರ ಗೋವಿಂದ್ ರಘುವಂಶಿಗೆ ಪೊಲೀಸರ ಫೋನ್‌ನಿಂದ ಕರೆ ಮಾಡಿದ್ದಾಳೆ.
ರಾಜಾ ಮೃತದೇಹ ಜೂನ್ 2 ರಂದು ಪತ್ತೆಯಾಗಿತ್ತು. ಸೋನಮ್ ತನ್ನ ಪತಿ ರಾಜಾ ಜೊತೆ ಹನಿಮೂನ್ ಆಚರಿಸಲು ಶಿಲ್ಲಾಂಗ್‌ಗೆ ಹೋಗಿದ್ದರು. ಆದರೆ ನಂತರ ಇಬ್ಬರೂ ನಾಪತ್ತೆಯಾಗಿದ್ದರು. ಕುಟುಂಬವು ಪೊಲೀಸರಿಗೆ ದೂರು ನೀಡಿದಾಗ, ದಂಪತಿಗಾಗಿ ಹುಡುಕಾಟ ಪ್ರಾರಂಭವಾಯಿತು. ಜೂನ್ 2 ರಂದು ರಾಜಾ ರಘುವಂಶಿ ಅವರ ಶವ ಪತ್ತೆಯಾಗಿತ್ತು. ಆದರೆ ಸೋನಮ್ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

ನವವಿವಾಹಿತರಾದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್, ಮೇ 23 ರಂದು ಕಾಣೆಯಾಗುವ ಮೊದಲು ಮೇಘಾಲಯದಲ್ಲಿ ತಮ್ಮ ಹನಿಮೂನ್ ಸಮಯದಲ್ಲಿ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜೂನ್ 2 ರಂದು ರಾಜಾ ರಘುವಂಶಿ ಅವರ ಮೃತದೇಹ ಪತ್ತೆಯಾಗಿದ್ದರೂ, ಅವರ ಪತ್ನಿಗಾಗಿ ಹುಡುಕಾಟ ನಡೆಯುತ್ತಿತ್ತು. ಮೇ 11ರಂದು ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದ ರಾಜಾ ರಘುವಂಶಿ(29) ಮತ್ತು ಸೋನಮ್‌ ರಘುವಂಶಿ(25), ಮೇ 20ರಂದು ಹನಿಮೂನ್‌ ಪಯಣ ಆರಂಭಿಸಿದ್ದರು. ಮೇ 21ರಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದಾರೆ. ಮೇ 22ರ ಬೆಳಿಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದ ದಂಪತಿ, ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ(ಚಿರಾಪುಂಜಿ) ತೆರಳುತ್ತಾರೆ.
ಈ ವೇಳೆ ಅವರು ಎರಡು ಲಗೇಜ್‌ ಬ್ಯಾಗ್‌ ಅನ್ನು ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25 ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದ ಅವರು ಕೊಠಡಿ ಬೇಕಾದಲ್ಲಿ ಕರೆ ಮಾಡುವುದಾಗಿಯೂ ಹೇಳಿದ್ದರು ಎನ್ನಲಾಗಿದೆ.



ನಂತರದ ಬೆಳವಣಿಗೆಯಲ್ಲಿ ವೀ ಸಾವ್ಡಾಂಗ್ ಜಲಪಾತದ ಕೆಳಗಿನ ಕಮರಿಯಲ್ಲಿ ಶವವಿರುವುದನ್ನು ಡ್ರೋನ್‌ ಪತ್ತೆ ಮಾಡುತ್ತದೆ. ಅದು ರಾಜ ರಘುವಂಶಿ ಮೃತದೇಹವೆಂದು ಕುಟುಂಬದವರು ಗುರುತಿಸುತ್ತಾರೆ. ಸೋನಮ್‌ಗಾಗಿ ಹುಟುಕಾಟ ಮುಂದುವರೆದಿತ್ತು ನಂತರ ಪೊಲೀಸರು ಒಬ್ಬ ವ್ಯಕ್ತಿಯನ್ನು ಉತ್ತರ ಪ್ರದೇಶದಿಂದ ಮತ್ತು ಇನ್ನಿಬ್ಬರು ಆರೋಪಿಗಳನ್ನು ಇಂದೋರ್‌ನಿಂದ ಬಂಧಿಸಿದ್ದಾರೆ ಎನ್ನಲಾಗಿದೆ. ಸೋನಮ್ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾದರು ಮತ್ತು ನಂತರ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆಗೆ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *

error: Content is protected !!