ಧರ್ಮಸ್ಥಳ ಮೂಲದ ಯುವತಿ ಆಕಾಂಕ್ಷಾ ಅನುಮಾನಾಸ್ಪದ ಸಾವು ಪ್ರಕರಣ: ಪ್ರೊಫೆಸರ್ ಪೊಲೀಸ್ ವಶಕ್ಕೆ
ಬೆಳ್ತಂಗಡಿ: ಧರ್ಮಸ್ಥಳದ ಯುವತಿ ಆಕಾಂಕ್ಷಾ ಎಸ್ ಅನುಮಾನಾಸ್ಪದ ಸಾವು ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಂಜಾಬ್ ಪೊಲೀಸರು, ಕೇರಳ ಮೂಲದ ಪ್ರೊಫೆಸರ್ ಬಿಜಿಲ್ ಸಿ ಮ್ಯಾಥ್ಯೂ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣ ಆರೋಪಿ ಎನ್ನಲಾಗಿರುವ ಪ್ರೊಫೆಸರ್ ಬಿಜಿಲ್ ಸಿ ಮ್ಯಾಥ್ಯೂ ಅವರನ್ನು ಮೇ 19ರಂದು ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳ ಗ್ರಾಮದ ಬೋಲಿಯಾರ್ ನಿವಾಸಿ 22 ವರ್ಷದ ಆಕಾಂಕ್ಷಾ ಎಸ್ ತನ್ನ ಪದವಿ ಪ್ರಮಾಣಪತ್ರ ಪಡೆಯಲು ಮೇ 16ರಂದು ದೆಹಲಿಯಿಂದ ಪಂಜಾಬ್‌ಗೆ ತೆರಳಿದ್ದರು. ಮೇ 17ರಂದು ಆಕೆ, ಪಂಜಾಬ್‌ನ ಜಲಂಧರ್‌ನ ಫಾಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಹಾಸ್ಟೆಲ್ ಕಟ್ಟಡದ ನಾಲ್ಕನೇ ಅಂತಸ್ಥಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆಕಾಂಕ್ಷಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮೇ 19ರಂದು ಮಧ್ಯಾಹ್ನದ ಬಳಿಕ ನಡೆಸಲಾಗಿದೆ. ನಂತರ ಸರ್ಕಾರಿ ಆಸ್ಪತ್ರೆಯು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ.
ಮೇ 20 ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗಿದ್ದು ಅಲ್ಲಿಂದ ರಾತ್ರಿ 8 ಗಂಟೆಗೆ ದೆಹಲಿಯಿಂದ ಹೊರಡುವ ಸ್ಪೈಸ್ ಜೆಟ್ ವಿಮಾನದ ಮೂಲಕ ಮೃತದೇಹವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗುತ್ತದೆ. ರಾತ್ರಿ 11 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ್ದು ಮೇ.21ರಂದು ಬೆಳಿಗ್ಗೆ ಮೃತದೇಹ ಧರ್ಮಸ್ಥಳದ ಬೋಲಿಯಾರ್ ತಲುಪಿದ್ದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಲಾಗಿದೆ ಎಂದು ತಿಳಿದು ಬಂದಿದೆ.