ಮಂಗಳೂರು: ಸಿಸಿಬಿ ಪೊಲೀಸರ ಅತೀ ದೊಡ್ಡ ಬೇಟೆ: ರೂ.6 ಕೋಟಿ ಮೌಲ್ಯದ ಡ್ರಗ್ಸ್ ಸಹಿತ ಆರೋಪಿ ವಶಕ್ಕೆ
ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮೂಲಕ ಆರು ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಸೆ. 29ರಂದು ಪಂಪ್‌ವೆಲ್ ಬಳಿಯ ಲಾಡ್ಜ್ ಒಂದರಲ್ಲಿ ಹೈದರ್ ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ಡ್ರಗ್ ಸಮೇತ ಬಂಧಿಸಿದ್ದರು. ಬಳಿಕ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಸಿಸಿಬಿ ಪೊಲೀಸರು ಆರೋಪಿಗೆ ಡ್ರಗ್ಸ್ ಪೂರೈಕೆ ಮಾಡುವ ಜಾಲದ ಕುರಿತು ತನಿಖೆ ಆರಂಭಿಸಿದ್ದರು.
ಆರೋಪಿಯಿಂದ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿದ್ದ ನೈಜೇರಿಯಾ ಮೂಲದ ಪೀಟರ್ ಅಕೆಡಿ ಬೆಲನೋವು ಎಂಬಾತನ ಮನೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಒಟ್ಟು 6 ಕೋಟಿ ಮೌಲ್ಯದ 6 ಕೆಜಿ 310 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.
ಈತ ಕರ್ನಾಟಕ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಈ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ. ಈತನ ಮೇಲೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತುಎನ್ನಲಾಗಿದೆ.