ಪುತ್ತೂರಿನಲ್ಲಿ 3000 ಉದ್ಯೋಗ ಸೃಷ್ಟಿ ಮಾಡುವ ಯೋಚನೆಯಿದೆ: ಅಶೋಕ್ ರೈ ಪಾಟ್ರಕೋಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ
ಪುತ್ತೂರು: ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ 2ರಿಂದ 3 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹೊಂದಿದ್ದು ಇದಕ್ಕಾಗಿ ಹಲವು ಯೋಜನೆಗಳನ್ನು ಇಲ್ಲಿ ಜ್ಯಾರಿ ಮಾಡುವ ಆಲೋಚನೆಯಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನಯಡಿ ಕೆದಿಲ ಗ್ರಾಮದಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣವಾಗಲಿದೆ. ಈ ಯೋಜನೆಯಡಿ ಸುಮಾರು 500ಕ್ಕೂ ಮಿಕ್ಕಿ ಮಂದಿ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ,ಕೊಯಿಲ ಜಾನುವಾರು ಕೇಂದ್ರಕ್ಕೆ ಪುನಶ್ಚೇತನ ದೊರೆಯಲಿದ್ದು ಅಲ್ಲಿ ಸುಮಾರು 700 ಮಂದಿಗೆ ಉದ್ಯೋಗ ಮತ್ತು ಕೆಎಂಎಫ್ ನ್ನು ಪುತ್ತೂರಿಗೆ ಸ್ಥಳಾಂತರ ಮಾಡುವುದರಿಂದ ಸುಮಾರು 1000 ಮಂದಿಗೆ ಉದ್ಯೋಗ ಲಭಿಸಲಿದೆ. ಸ್ಥಳೀಯರನ್ನೇ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕರು ಹೇಳಿದರು.
ಪುತ್ತೂರಿಗೆ ಹಣ ಬಂದು ಬೀಳಬೇಕು
ಪುತ್ತೂರು ಅಭಿವೃದ್ದಿಯಾಗಬೇಕಾದರೆ ಒಂದಷ್ಟು ಹಣ ಇಲ್ಲಿ ಬೀಳಬೇಕು, ಉದ್ಯಮಗಳು ಆರಂಭವಾದರೆ ಮಾತ್ರ ಇಲ್ಲಿ ಎಲ್ಲರಿಗೂ ವ್ಯಾಪಾರ , ವ್ಯವಹಾರವಾಗುತ್ತದೆ ಇಲ್ಲದೇ ಹೋದರೆ ಕೇವಲ ಅಡಿಕೆ ಮಾರಿದ ಹಣ ಮಾತ್ರ ಇಲ್ಲಿ ಚಲಾವಣೆಯಲ್ಲಿರುತ್ತದೆ ಎಂದು ಹೇಳಿದ ಶಾಸಕರು ಪುತ್ತೂರಿನ ಯುವಕ, ಯುವತಿಯರಿಗೆ ಉದ್ಯೋಗ ಲಭಿಸಿದರೆ ಅವರ ಕುಟುಂಬಕ್ಕೂ ಆಧಾರವಾಗುತ್ತದೆ ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಯಾವುದೇ ಉದ್ಯಮ ಆರಂಭವಾಗುವುದಾದರೂ ಅದಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಹೇಳಿದರು.ಪುತ್ತೂರಿನ ಜನತೆ ನೆಮ್ಮದಿಯಿಂದ ಇರಬೇಕೆಂಬುದೇ ನನ್ನ ಆಶಯವಾಗಿದೆ ಎಂದು ಶಾಸಕರು ಹೇಳಿದರು.