ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳ ಮೋಕ್ಷ ಮಾಡಿಸಿದ್ದ ಪ್ರಕರಣ: ವೀಡಿಯೋ ಮೂಲಕ ಕ್ಷಮೆ ಕೇಳಿದ ಶಿಕ್ಷಕಿ
ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳ ಮೋಕ್ಷ ಮಾಡಿಸಿದ್ದ ಉತ್ತರ ಪ್ರದೇಶದ ಶಾಲೆಯೊಂದರ ಶಿಕ್ಷಕಿ ತೃಪ್ತಿ ತ್ಯಾಗಿ ಅವರು ವೀಡಿಯೋ ಒಂದನ್ನು ಹರಿಬಿಟ್ಟಿದ್ದು, ಕೈ ಮುಗಿದ ಕ್ಷಮೆ ಕೇಳಿರುವ ವಿಡಿಯೋ ಹರಿದಾಡುತ್ತಿದ್ದು ಶಿಕ್ಷಕಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಮುಝಾಫರ್ ನಗರದ ಶಾಲೆಯೊಂದರ ಪ್ರಾಂಶುಪಾಲೆಯೂ ಆಗಿರುವ ಶಿಕ್ಷಕಿ ವೀಡಿಯೋ ಸಂದೇಶದಲ್ಲಿ “ನಾನು ತಪ್ಪು ಮಾಡಿದ್ದೇನೆ. ಆದರೆ ಹಿಂದು ಮುಸ್ಲಿಂ ಭಾವನೆ ನನ್ನಲ್ಲಿರಲಿಲ್ಲ. ಮಕ್ಕಳು ಹೋಂ ವರ್ಕ್ ಮಾಡಿರಲಿಲ್ಲ. ಅವರಿಗೆ ಸರಿಯಾಗಿ ಪಾಠಗಳನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎನ್ನುವುದಷ್ಟೇ ನನ್ನ ಉದ್ದೇಶ” ಎಂದ್ದಿದ್ದಾರೆ.
ನಾನು ಅಂಗವಿಕಲೆಯಾಗಿದ್ದು, ಎದ್ದು ನಿಲ್ಲಲು ನನಗೆ ಆಗುವುದಿಲ್ಲ. ಹಾಗಾಗಿ ಉಳಿದ ವಿದ್ಯಾರ್ಥಿಗಳಲ್ಲಿ ಆತನಿಗೆ ಕಪಾಳಕ್ಕೆ ಹಲವುಬಾರಿ ಬಾರಿಸಲು ಹೇಳಿದೆ. ಆತ ಶೈಕ್ಷಣಿಕ ಪ್ರಗತಿ ಸಾಧಿಸಲಿ ಎಂಬ ಉದ್ದೇಶ ನನ್ನದಾಗಿತ್ತು ಎಂದು ತಿಳಿಸಿದ್ದಾರೆ.
ನನ್ನ ಮನಸ್ಸಿನಲ್ಲಿ ವಿದ್ಯಾರ್ಥಿಗಳನ್ನು ಹಿಂದೂ ಮುಸ್ಲಿಂ ಎಂದು ಒಡೆಯುವ ಚಿಂತನೆಯಿಲ್ಲ. ಬಹಳಷ್ಟು ಮುಸ್ಲಿಂ ಪೋಷಕರ ಬಳಿ ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣವಿಲ್ಲ. ಅವರೆಲ್ಲರಿಗೂ ನಾನು ಉಚಿತವಾಗಿ ಶಿಕ್ಷಣ ನೀಡುತ್ತಿದ್ದೇನೆ. ಮುಸ್ಲಿಂ ವಿದ್ಯಾರ್ಥಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ನನ್ನಲ್ಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.