ರಾಷ್ಟ್ರೀಯ

ಎನ್‌ಡಿಟಿವಿಯ ಖ್ಯಾತ ಹಿರಿಯ ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ



ನವದೆಹಲಿ:  ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಎನ್‌ಡಿಟಿವಿ ಪ್ರವರ್ತಕ ಆರ್‌ಆರ್‌ಪಿಆರ್‌ಎಚ್ ಮಂಡಳಿಯ ನಿರ್ದೇಶಕರಾಗಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಖ್ಯಾತ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಬುಧವಾರ ಚಾನೆಲ್‌ಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಚಾನೆಲ್‌ಗೆ ಕಳುಹಿಸಿದ ಇ-ಮೇಲ್ ಪ್ರಕಾರ, “ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ರಾಜೀನಾಮೆ ವಿನಂತಿಯನ್ನು ಒಪ್ಪಿಕೊಂಡಿದೆ” ಎಂದು ಎನ್‌ಡಿಟಿವಿ ತಿಳಿಸಿದೆ.

“ಕೆಲವೇ ಪತ್ರಕರ್ತರು ರವೀಶ್ ಅವರಂತೆ ಜನರ ಮೇಲೆ ಪ್ರಭಾವ ಬೀರಿದ್ದಾರೆ. ಭಾರತದೊಳಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಪಡೆದಿರುವ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಮನ್ನಣೆಗಳು ಇದಕ್ಕೆ ಸಾಕ್ಷಿ. ಹಿಂದುಳಿದವರ ಹಕ್ಕುಗಳು ಮತ್ತು ಅಗತ್ಯಗಳನ್ನು ಬೆಂಬಲಿಸುವುದನ್ನು ಅವರ ದೈನಂದಿನ ವರದಿಗಳಲ್ಲಿ ಕಾಣಬಹುದು. ಇದು ಅವರ ಬಗ್ಗೆ ಜನರಲ್ಲಿರುವ ಅಪಾರ ಹೆಗ್ಗಳಿಕೆಯನ್ನು ತೋರಿಸುತ್ತದೆ” ಎಂದು ಎನ್‌ಡಿಟಿವಿ ಅಧ್ಯಕ್ಷೆ ಸುಪರ್ಣಾ ಸಿಂಗ್ ಉದ್ಯೋಗಿಗಳಿಗೆ ಕಳುಹಿಸಿರುವ ಆಂತರಿಕ ಇಮೇಲ್‌ನಲ್ಲಿ ತಿಳಿಸಿದ್ದಾರೆ.

“ರವೀಶ್ ದಶಕಗಳಿಂದ ಎನ್‌ಡಿಟಿವಿಯ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಕೊಡುಗೆ ಅಪಾರವಾಗಿದೆ. ಅವರು ಹೊಸದಾಗಿ ಏನಾದರೂ ಪ್ರಾರಂಭಿಸಿದಾಗ ಅವರು ಯಶಸ್ವಿಯಾಗುತ್ತಾರೆ ಎಂದು ನಮಗೆ ತಿಳಿದಿದೆ” ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಪತ್ರಕರ್ತರಾಗಿರುವ ರವೀಶ್ ಕುಮಾರ್, ಎನ್‌ಡಿಟಿವಿಯ ಪ್ರಮುಖ ವಾರದ ಶೋ ಆಗಿದ್ದ ಹಮ್ ಲೋಗ್, ರವೀಶ್ ಕಿ ರಿಪೋರ್ಟ್, ದೇಸ್ ಕಿ ಬಾತ್ ಮತ್ತು ಪ್ರೈಮ್ ಟೈಮ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಿರೂಪಕರಾಗಿ, ನಡೆಸಿಕೊಡುತ್ತಿದ್ದರು. ಇವರ ಹೆಚ್ಚಿನ ಕಾರ್ಯಕ್ರಮಗಳು ಜನಪರವಾಗಿ ಇರುತ್ತಿದ್ದರಿಂದ, ‘ಜನಪರ ಪತ್ರಕರ್ತ’ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!