ಆ್ಯಸಿಡ್ ದಾಳಿಗೊಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಉದ್ಯೋಗ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ಥೆ ಸ್ನಾತಕೋತ್ತರ ಪದವೀಧರೆಗೆ ತಮ್ಮ ಸಚಿವಾಲಯದಲ್ಲಿ ಉದ್ಯೋಗ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಮುಖ್ಯಮಂತ್ರಿಗಳು ಸಂತ್ರಸ್ಥೆಯ ಅಹವಾಲನ್ನು ಕೇಳಿ ಸ್ಥಳದಲ್ಲೇ ಉದ್ಯೋಗದ ಭರವಸೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರ ಈ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
2022ರಲ್ಲಿ ಆಸಿಡ್ ದಾಳಿಗೆ ತುತ್ತಾಗಿದ್ದ ಸಂತ್ರಸ್ಥೆ ಎಂ.ಕಾಂ ಪದವೀಧರೆ ಆಗಿದ್ದಾರೆ. ತಂದೆ ಮತ್ತು ತಾಯಿಯ ಜತೆ ಜನತಾ ದರ್ಶನಕ್ಕೆ ಬಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲೂ ಉದ್ಯೋಗದ ಮನವಿ ಮಾಡಿದ್ದೆವು. ಅವರು ಭರವಸೆ ನೀಡಿದ್ದರು. ಆದರೆ ಉದ್ಯೋಗ ಮಾತ್ರ ಕೊಡಲಿಲ್ಲ ಎಂದು ಅಳಲು ತೋಡಿಕೊಂಡರು.