ಹಾಸ್ಯ ನಟನೆಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿರುವ ಸುಳ್ಯದ ಟೀಂ ಕಟಾಯಿ ತಂಡ:
ಯುವಕರೊಂದಿಗೆ ಮಿಂಚುತ್ತಿರುವ ಹಿರಿಯ ಪಾತ್ರಧಾರಿಗಳು
✍🏻ಹಸೈನಾರ್ ಜಯನಗರ
ಸುಳ್ಯದ ಕುರುಂಜಿಗುಡ್ಡೆ ಪರಿಸರದ ಯುವಕರ ತಂಡವೊಂದು ಸ್ಥಳೀಯ ವಯೋವೃದ್ಧರೋರ್ವರನ್ನು ಸೇರಿಸಿ ಮಾಡುತ್ತಿರುವ ಹಾಸ್ಯ ಭರಿತ ಕಿರುಚಿತ್ರ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಟೀಂ ಕಟಾಯಿ ಎಂಬ ಹೆಸರಿನ ಮೂಲಕ ಈ ಯುವಕರು ಮಾಡಿರುವ ಹಾಸ್ಯ ಭರಿತ ವಿಡಿಯೋ ತುಣುಕುಗಳು ಇಂದು ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳಲು ಕಾರಣವಾಗಿದೆ.

ಈ ತಂಡದ ಮುಖ್ಯಸ್ಥ ಕಲೀಲ್ ಎಂಬ ಯುವಕ. ಈತ ಕುರುಂಜಿಗುಡ್ಡೆ ನಿವಾಸಿ ಉಮ್ಮರ್ ಮತ್ತು ಜಮೀಲಾ ಎಂಬವರ ಪುತ್ರ. ಕಳೆದ ಹಲವಾರು ವರ್ಷಗಳಿಂದ ಕಿರು ಚಿತ್ರಗಳನ್ನು ತಯಾರಿಸಿ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಪಡಿಸುತ್ತಿದ್ದ ಇವರಿಗೆ ಕಳೆದ 9 ತಿಂಗಳಿನಿಂದ ಸಾವಿರಾರು ಮಂದಿ ಅಭಿಮಾನಿಗಳನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ನಿರ್ಮಿಸುವ ಕಿರು ಚಿತ್ರಗಳ ನಿರ್ಮಾಪಕರು ಇವರೇ, ನಿರ್ದೇಶಕರೂ ಇವರೇ ಆಗಿದ್ದಾರೆ. ಅದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಪಡಿಸಲು ವಿಡಿಯೋ ಎಡಿಟಿಂಗ್ ಕಾರ್ಯವನ್ನು ಕೂಡ ಇವರೇ ಮಾಡುತ್ತಾರೆ.
ಇವರು ನಿರ್ಮಿಸಿದ ಕೆಲವೊಂದು ಹಾಸ್ಯ ತುಣುಕುಗಳ ವಿಡಿಯೋ ಚಿತ್ರಕ್ಕೆ ಅವರ ತಂದೆ ಉಮ್ಮರ್ ಕೂಡ ಪಾತ್ರಧಾರಿಯಾಗಿ ನಟಿಸಿದ್ದಾರೆ. ಹಿರಿಯ ಸಹೋದರನಿಗೆ ಸಾಥ್ ನೀಡುತ್ತಿರುವ ಅವರ ಕಿರಿಯ ಸಹೋದರರಾದ ಸಲೀಲ್ ಹಾಗೂ ಜಲೀಲ್ ಎಂಬುವವರು ಕೂಡ ಅನೇಕ ವಿಡಿಯೋಗಳಲ್ಲಿ ನಟನೆಯಲ್ಲಿ ಕಂಡು ಬರುತ್ತಿದ್ದಾರೆ.
ಇವರ ಟೀಮ್‌ನ ಯಶಸ್ವಿ ಕಲಾಕಾರರು ಅಂದರೆ ಖಾದರ್ ಮತ್ತು ರವಿ. ಇವರು ಸ್ಥಳೀಯ ಕುರುಂಜಿಗುಡ್ಡೆ ನಿವಾಸಿಗಳಾಗಿದ್ದು ಯುವಕರ ತಂಡದ ವಿಡಿಯೋ ತುಣುಕಿನ ಯಶಸ್ವಿಗೆ ಈ ಇಬ್ಬರು ಹಿರಿಯ ಕಲಾಕಾರರು ಬಹಳ ಮುಖ್ಯ ಪಾತ್ರ ಎನಿಸಿದ್ದಾರೆ. ಖಾದರ್‌ಚ ಎಂದೇ ಫೇಮಸ್ ಹೊಂದಿರುವ 65 ವರ್ಷ ಪ್ರಾಯದ ಇವರು ಕಟಾಯಿ ತಂಡದ ಯುವಕರೊಂದಿಗೆ ಬೇರೆ ಬೇರೆ ಪಾತ್ರಗಳನ್ನು ಮಾಡುವ ಮೂಲಕ ಇಂದು ಸಾವಿರಾರು ಅಭಿಮಾನಿ ಬಳಗದವರನ್ನು ಹೊಂದಿಕೊಂಡಿದ್ದಾರೆ.
ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಇವರು ಇದೀಗ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುವುದರ ಜೊತೆಗೆ ಇಂದು ಸಾವಿರಾರು ಮಂದಿಯನ್ನು ನಗಿಸುವ ಮೂಲಕ ನೋವು ತುಂಬಿರುವ ಮನಗಳಿಗೆ ನಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ತಂಡದ ಮತ್ತೋರ್ವ ಹಾಸ್ಯ ಕಲಾವಿದ ರವಿ ಮೂಲತಃ ಕುರುಂಜಿಗುಡ್ಡೆ ನಿವಾಸಿಯಾಗಿದ್ದು ಸುಳ್ಯದ ಕೆನರಾ ಬ್ಯಾಂಕಿನ ಪಿಗ್ಮಿ ಸಂಗ್ರಹಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ರವಿ ಟೀಂ ಕಟಾಯಿ ತಂಡದ ಬಹು ಮುಖ್ಯ ಪಾತ್ರಧಾರಿಯಾಗಿ ವಿವಿಧ ರೀತಿಯ ಅಭಿನಯಗಳನ್ನು ಮಾಡುವ ಮೂಲಕ ಜನರ ಮನವನ್ನು ಗೆದ್ದಿದ್ದಾರೆ. ಇತ್ತೀಚಿಗೆ ಬಂದಂತಹ ಹಾಸ್ಯ ವಿಡಿಯೋದಲ್ಲಿ ಅರಬ್ ದೇಶದ ಶೇಕ್ ಪಾತ್ರವನ್ನು ತುಂಬಾ ಹಾಸ್ಯ ಭರಿತವಾಗಿ ಮಾಡಿದ್ದು ಇವರ ಅಭಿನಯಕ್ಕೆ ಸಾವಿರಾರು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸುಮಾರು 264 ವೀಡಿಯೋಗಳನ್ನು ಮಾಡಿರುವ ಈ ತಂಡ ಇದರಲ್ಲಿ ಅರಬಿ ಪಾತ್ರ, ಶರಭತ್, ಸೋಪ್, ಮುಂತಾದ ಕಿರು ವಿಡಿಯೋಗಳು 8 ಲಕ್ಷಕ್ಕೂ ಅಧಿಕ ಮಂದಿಯನ್ನು ವೀಕ್ಷಿಸುವಂತೆ ಮಾಡಿದೆ. ಕನಿಷ್ಠ 35 ಸೆಕೆಂಡ್ ನಿಂದ ಗರಿಷ್ಠ 3 ನಿಮಿಷದವರೆಗಿನ ವಿಡಿಯೋ ತುಣುಕುಗಳನ್ನು ಇವರು ನಿರ್ಮಿಸಿ ಯೂಟ್ಯೂಬ್ ಮತ್ತು ಟ್ವಿಟರ್ ಖಾತೆಗಳಲ್ಲಿ ಹರಿಬಿಡುತ್ತಾರೆ. ತಮ್ಮ ಮನೆಯ ಪರಿಸರದಲ್ಲಿ ಮಾಡುತ್ತಿರುವುದು ವಿಶೇಷವಾಗಿದೆ. ಇವರ ಹಾಸ್ಯ ವಿಡಿಯೋಗಳು ವಿಶ್ವದಾದ್ಯಂತ ಪ್ರಸರಿಸಿ ಲಕ್ಷಾಂತರ ಮಂದಿ ನೋಡುವಂತೆ ಮಾಡುತ್ತಿದೆ.
ಇವರ ತಂಡದಲ್ಲಿ ಸ್ಥಳೀಯ ನಿವಾಸಿ ಅಭಿಷೇಕ್ ಎಂಬುವವರು ಡಿಸೈನ್ ಮತ್ತು ಪೋಸ್ಟರ್ ಎಡಿಟರ್ ಆಗಿ ಕೆಲಸ ನಿರ್ವಹಿಸುತ್ತಾರೆ. ತಂಡದ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕೆಲವು ಕಿರು ಚಿತ್ರತಂಡಗಳು ಇವರನ್ನು ಆಹ್ವಾನಿಸಿದ್ದಾರೆ ಎಂದು ಕೂಡ ತಿಳಿದುಬಂದಿದೆ.
ಆರಂಭದಲ್ಲಿ ಕೇವಲ ಟೈಮ್ ಪಾಸಿಗಾಗಿ ಮಾಡುತ್ತಿದ್ದ ಈ ಹವ್ಯಾಸವು ಇದೀಗ ಆದಾಯದ ಮೂಲಕ್ಕೂ ಕಾರಣವಾಗುತ್ತಿದೆ ಎಂದು ಟೀಮ್ ಕಟಾಯಿ ತಂಡದ ಸದಸ್ಯರು ಹೇಳಿಕೊಳ್ಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇದರಲ್ಲಿ ಬರುವ ಆದಾಯದಿಂದ ಅಲ್ಪ ಭಾಗವನ್ನು ಬಡವರ ಮತ್ತು ರೋಗಿಗಳ ಸಹಾಯಕ್ಕಾಗಿ ಬಳಸುವ ಯೋಜನೆಗಳನ್ನು ತಂಡದಿಂದ ರೂಪಿಸಲಾಗುತ್ತಿದೆ ಎಂದು ತಂಡದ ಮುಖ್ಯಸ್ಥ ಕಲೀಲ್ ಹೇಳಿದ್ದಾರೆ.
ಒಟ್ಟಿನಲ್ಲಿ ಈ ಯುವಕರ ತಂಡವು ಮಾಡುತ್ತಿರುವ ಹಾಸ್ಯ ನಟನೆಯ ಕಿರು ಚಿತ್ರಗಳು ಬೇರೆ ಬೇರೆ ಕಾರಣಗಳಿಂದ ಮನಸ್ಸು ನೊಂದಿರುವ ಜನರಿಗೆ ನೋವನ್ನು ಮರೆತು ನಗು ತರುವ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸೋಣ.





