ಜೆಡಿಎಸ್ ಬಂಡಾಯ ಅಭ್ಯರ್ಥಿ ಅಶ್ರಫ್ ಕಲ್ಲೇಗ ಬೆಂಬಲಿಗರ ಸಭೆ
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರ ಬೆಂಬಲಿಗರ ಸಭೆ ಪುತ್ತೂರು ನೆಹರೂನಗರದಲ್ಲಿ ನಡೆಯಿತು.
ಸಭೆಯಲ್ಲಿ ಅಶ್ರಫ್ ಕಲ್ಲೇಗ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹಾಗೂ ಚುನಾವಣಾ ಪ್ರಚಾರದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿರುವುದಾಗಿ ತಿಳಿದು ಬಂದಿದೆ. ಸಭೆಯಲ್ಲಿದ್ದ ಹಲವು ಮುಸ್ಲಿಂ ಮುಖಂಡರು ಮತ್ತು ಅಶ್ರಫ್ ಕಲ್ಲೇಗ ಅವರ ಬೆಂಬಲಿಗರು ವಿವಿಧ ಸಲಹೆ ಸೂಚನೆಗಳನ್ನು ನೀಡಿ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ. ಕೆಲವೇ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಸೇರಿಸಿ ದೊಡ್ಡ ಮಟ್ಟದ ಸಭೆ ಆಯೋಜಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಪಕ್ಷೇತರ ಅಭ್ಯರ್ಥಿ ಅಶ್ರಫ್ ಕಲ್ಲೇಗ ಅವರು ಮಾತನಾಡಿ ನನಗೆ ಅನ್ಯಾಯ ಆಗಿದ್ದು ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ. ನನಗೆ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದ್ದು ನನ್ನ ತಾಕತ್ತು ಏನೆಂಬುದನ್ನು ತೋರಿಸಿ ಕೊಡುತ್ತೇನೆ ಎಂದು ಹೇಳಿದರು.