ಸುಳ್ಯ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ
ಅಭ್ಯರ್ಥಿ ಆಯ್ಕೆಯಲ್ಲಿ ನಮ್ಮ ಹಸ್ತಕ್ಷೇಪ ಇರಲಿಲ್ಲ, ಹಿರಿಯರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ: ಮಂಜುನಾಥ್ ಭಂಡಾರಿ
ವಿಧಾನಸಭಾ ಚುನಾವಣೆಯ ಅಂಗವಾಗಿ ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ನೂತನ ಕಾಂಗ್ರೆಸ್ ಕಚೇರಿಯ ಉದ್ಘಾಟನೆ ನಡೆಯಿತು.
ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಇರುವ ಸುಳ್ಯ ಸೆಂಟರ್ ನಲ್ಲಿ ನೂತನ ಕಚೇರಿಯನ್ನು ಆರಂಭಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಕಚೇರಿಯನ್ನು ಉದ್ಘಾಟಿಸಿದರು. ನಂತರ ಚುನಾವಣಾ ಪ್ರಚಾರ ಸಭೆಯನ್ನು ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ನಾವು ಯಾವುದೇ ಹಸ್ತಕ್ಷೇಪ ಮಾಡಲಿಲ್ಲ. ಹಿರಿಯರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ.ಪಕ್ಷದ ಮುಖಂಡರು ಸೂಚಿಸಿರುವ ಅಭ್ಯರ್ಥಿಯನ್ನು ನಾವು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ದುಡಿಯಬೇಕಾಗಿದೆ ಎಂದು ಹೇಳಿದರು.ಅಭ್ಯರ್ಥಿ ಆಯ್ಕೆಯ ಬಗ್ಗೆ ಕೆಲವು ಕಾರ್ಯಕರ್ತರಲ್ಲಿ ಉಂಟಾಗಿರುವ ಬೇಸರವನ್ನು ಹಿರಿಯರು ಸರಿಪಡಿಸಿಕೊಳ್ಳುತ್ತಾರೆ. ಆದ್ದರಿಂದ ಯಾರೂ ಕೂಡ ವೈಯಕ್ತಿಕ ಟೀಕೆಗಳಿಗೆ ಹೋಗುವುದು ಬೇಡ.ಈಗಾಗಲೇ ಪಕ್ಷ ಯಾವ ಅಭ್ಯರ್ಥಿಯನ್ನು ಸೂಚಿಸಿದೆಯೋ ಅವರಿಗಾಗಿ ಮತ್ತು ಪಕ್ಷದ ಗೆಲುವಿಗಾಗಿ ಪ್ರತಿಯೊಬ್ಬರು ದುಡಿಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ‘ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಹಿಡಿಯುವುದು ಸತ್ಯ ಸಂಗತಿಯಾಗಿದೆ.ಬಿಜೆಪಿ ಪಕ್ಷ ಅಧಿಕಾರಕ್ಕಾಗಿ ಹುಟ್ಟಿದ ಪಕ್ಷವಾಗಿದೆ. ಭ್ರಷ್ಟಾಚಾರ, 40 ಪರ್ಸೆಂಟ್, ಶಾಸಕರನ್ನು ಖರೀದಿಸುವುದು,ದೇಶದ ಒಗ್ಗಟ್ಟನ್ನು ಹೊಡೆಯುವುದು, ಬೆಲೆ ಏರಿಕೆಗಳನ್ನು ಮಾಡಿ ಬಡವರ ಜೀವನವನ್ನು ನಾಶ ಮಾಡುವುದು ಈ ರೀತಿಯ ದುರಾಡಳಿತದೊಂದಿಗೆ ಅಧಿಕಾರವನ್ನು ಹಿಡಿಯಲು ಪ್ರಯತ್ನಿಸುವವರಾಗಿದ್ದಾರೆ. ಆದ್ದರಿಂದ ಈ ಬಾರಿ ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದವನ್ನು ಮಾಡಿ ಅಧಿಕಾರಕ್ಕೆ ತರುವಲ್ಲಿ ದೃಢ ನಮಗೆಲ್ಲರಿಗೂ ವಿಶ್ವಾಸವಿದೆ. ಆದ್ದರಿಂದ ಯಾವುದೇ ವಿಷಯದಲ್ಲಿ ಗೊಂದಲಕ್ಕೆ ಅವಕಾಶ ಕೊಡದೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿ ಕೊಳ್ಳಬೇಕು ಎಂದು ಹೇಳಿದರು.
ಮಂಗಳೂರು ಮಾಜಿ ಮೇಯರ್ ಶ್ರೀಮತಿ ಅಪ್ಪಿ ಮಾತನಾಡಿ ಪಕ್ಷದ ಅಭ್ಯರ್ಥಿ ಯಾರೇ ಆಗಿರಲಿ ಒಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಪಕ್ಷದ ಗೆಲುವಿಗಾಗಿ ಎಲ್ಲರೂ ಪ್ರಯತ್ನಿಸುವಂತೆ ಕರೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ ಸುಳ್ಯದ ಪ್ರತಿಯೊಬ್ಬ ಪಕ್ಷದ ನಾಯಕರುಗಳು ಚುನಾವಣೆಯಲ್ಲಿ ತಮ್ಮ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ನಮ್ಮನ್ನು ನಂಬಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರುಗಳು ಪಕ್ಷಕ್ಕಾಗಿ ಕೆಲಸ ಮಾಡುವವರಿರುತ್ತಾರೆ. ಆದ್ದರಿಂದ ಅವರ ಬಗ್ಗೆ ಎಲ್ಲಾ ನಾಯಕರುಗಳು ಗಮನಹರಿಸಬೇಕಾಗಿದೆ. ಪ್ರತಿಯೊಬ್ಬರು ಈ ಬಾರಿ ಚುನಾವಣೆಯಲ್ಲಿ ಕಠಿಣ ಪರಿಶ್ರಮ ಮಾಡುವ ಮೂಲಕ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದು ಹೇಳಿದರು.
ಸುಳ್ಯ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಎಂ ವೆಂಕಪ್ಪ ಗೌಡ ಮಾತನಾಡಿ ಸುಳ್ಯ ತಾಲೂಕಿನ ಜನತೆ ಸುಳ್ಯದ ಶಾಸಕರ ವಿರುದ್ಧ ಸಾಕಷ್ಟು ಬೇಸರಗೊಂಡಿದ್ದಾರೆ. ಅವರದೇ ಪಕ್ಷದ ಕಾರ್ಯಕರ್ತರುಗಳು ರಸ್ತೆಯ ಅಭಿವೃದ್ಧಿಗಾಗಿ ಭಿಕ್ಷೆಯನ್ನು ಬೇಡುವ ಪರಿಸ್ಥಿತಿಗೆ ಹೋರಾಟವನ್ನು ಮಾಡುತ್ತಿದ್ದಾರೆ. ಸುಳ್ಯದ ಮೂಲೆ ಮೂಲೆಗಳಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ಗಳು ಬೀಳುತ್ತಿದೆ. ಆದ್ದರಿಂದ ಇಂತಹ ಪ್ರದೇಶಗಳಿಗೆ ಭೇಟಿ ನೀಡಿ ನೊಂದ ಜನರ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸ್ಪಂದಿಸುವ ಭರವಸೆಯನ್ನು ನೀಡುವ ಮೂಲಕ ಪಕ್ಷದ ಗೆಲುವಿಗಾಗಿ ದುಡಿಯಬೇಕು ಎಂದು ಹೇಳಿದರು.
ಅಲ್ಲದೆ ಇದೀಗ ಪಕ್ಷದಲ್ಲಿ ಉದ್ಭವ ಗೊಂಡಿರುವ ಅಭ್ಯರ್ಥಿ ಸ್ಥಾನದ ಆಯ್ಕೆಯಲ್ಲಿ ಕೃಷ್ಣಪ್ಪ ಮತ್ತು ನಂದಕುಮಾರ್ ರವರ ವಿಷಯದ ಕುರಿತ ಗೊಂದಲವನ್ನು ಪಕ್ಷದ ಮುಖಂಡರುಗಳು ನೇತೃತ್ವ ವಹಿಸಿ ಆದಷ್ಟು ಶೀಘ್ರದಲ್ಲಿ ಬಗೆಹರಿಸಿಕೊಳ್ಳಬೇಕೆಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಮಾತನಾಡಿ ನಾನು ಕಳೆದ ಏಳೆಂಟು ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಅಲ್ಲದೆ ಸುಳ್ಯದಲ್ಲಿ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ.
ಯಾರಿಗೂ ಕೂಡ ಮನಸಿಗೆ ಬೇಸರವಾಗುವ ರೀತಿಯಲ್ಲಿ ನಾನು ಯಾವುದೇ ವರ್ತನೆಗಳನ್ನು ಮಾಡಲಿಲ್ಲ. ನನ್ನಿಂದ ಯಾರಾದ್ರೂ ಕಾರ್ಯಕರ್ತರ ಗಳಿಗೆ ಮನಸ್ಸಿಗೆ ಬೇಜಾರಾಗಿದ್ದಲ್ಲಿ ಈ ಸಭೆಯ ಮೂಲಕ ಕ್ಷಮೆ ಯಾಚಿಸುವುದಾಗಿ,ಅಲ್ಲದೆ ನಿಮ್ಮೆಲ್ಲರ ಆಶೀರ್ವಾದದಿಂದ ಪಕ್ಷದ ಮುಖಂಡರುಗಳು ಈ ಬಾರಿ ಸುಳ್ಯದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದು ಎಲ್ಲರ ಸಹಕಾರವನ್ನು ಬಯಸುವುದಾಗಿ ಹೇಳಿದರು. ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಂದು ಸುಳ್ಯದ ಪ್ರತಿಯೊಂದು ಅಭಿವೃದ್ಧಿ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರೊಂದಿಗೆ ಒಗ್ಗಟ್ಟಾಗಿ ಮುಂದುವರಿಯುವ ವಿಶ್ವಾಸವನ್ನು ನೀಡುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಮಾಜಿ ಸದಸ್ಯ ಡಾ. ರಘು, ಕೆಪಿಸಿಸಿ ವಕ್ತಾರ ಟಿಎಂ ಶಹೀದ್, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ದ. ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ಜಿ ಕೃಷ್ಣಪ್ಪರವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಆಯ್ಕೆ ಮಾಡಿದ್ದು ಅವರ ಗೆಲುವಿಗಾಗಿ ಎಲ್ಲರೂ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ, ಒಗ್ಗಟ್ಟಾಗಿ ದುಡಿಯುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಪಕ್ಷದ ಮುಖಂಡರುಗಳು ವಿವಿಧ ಘಟಕದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಸದಾನಂದ ಮಾವಂಜಿ ಸ್ವಾಗತಿಸಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕೋಲ್ಚರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪಿಎಸ್ ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು.