ಮದುವೆಗೆ ಗಿಫ್ಟ್ ಸಿಕ್ಕಿದ ಹೋಮ್ ಥೀಯೇಟರ್ ಸ್ಫೋಟಗೊಂಡು ಮದುಮಗ ಹಾಗೂ ಸಹೋದರ ಮೃತಪಟ್ಟ ಪ್ರಕರಣ: ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ಮದುವೆಗೆ ಉಡುಗೊರೆಯಾಗಿ ನೀಡಿದ್ದ ಹೋಮ್ ಥಿಯೇಟರ್ ಸ್ಪೋಟಗೊಂಡು ನವ ವಿವಾಹಿತ ಹಾಗೂ ಆತನ ಸಹೋದರ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದ್ದು ಪ್ರಕರಣಕ್ಕೆ ಇದೀಗ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಹೋಮ್ ಥಿಯೇಟರ್ ಒಳಗೆ ಸ್ಫೋಟಕವನ್ನು ಇಡಲಾಗಿತ್ತು ಎನ್ನುವ ಅಂಶ ಬೆಳಕಿಗೆ ಬಂದಿದ್ದು ಸ್ಪೋಟಕ ಇಟ್ಟದ್ದು ಯಾರು ಮತ್ತು ಯಾಕೆ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಎ.1ರಂದು ಹೇಮೇಂದ್ರ ಮೆರಾವಿ ಅವರ ವಿವಾಹವಾಗಿದ್ದು ಈ ವೇಳೆ ಸಾಕಷ್ಟು ಉಡುಗೊರೆಗಳು ಸಿಕ್ಕಿದೆ. ಮದುವೆಯ ಕಾರ್ಯಕ್ರಮ ಮುಗಿದ ಬಳಿಕ ಮನೆಮಂದಿ ಸೇರಿಕೊಂಡು ಬಹಳ ಖುಷಿಯಿಂದ ಮದುವೆಗೆ ಸಿಕ್ಕಿದ ಉಡುಗೊರೆಗಳನ್ನು ನೋಡುತ್ತಿದ್ದ ವೇಳೆ ಹೋಮ್ ಥಿಯೇಟರ್ ಕೂಡಾ ಉಡುಗೊರೆಯಾಗಿ ಬಂದಿತ್ತು. ಹೋಮ್ ಥೀಯೇಟರ್ ಸಿಕ್ಕಿದ ಖುಷಿಯಲ್ಲಿ ಮದುಮಗ ಹಾಗೂ ಆತನ ಸಹೋದರ ಸೇರಿ ಹೋಮ್ ಥಿಯೇಟರ್ ನ ವಯರ್ ಸೆಟ್ ಮಾಡಿ ಸ್ವಿಚ್ ಹಾಕಿದ ಕೂಡಲೆ ಹೋಮ್ ಥಿಯೇಟರ್ ಸ್ಪೋಟಗೊಂಡಿದೆ.
ಆಗ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟರೆ ಸಹೋದರ ಸೇರಿ ಐದು ಮಂದಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹೋದರ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಈ ವೇಳೆ ಸ್ಪೋಟಕ ಮಾಹಿತಿ ಬೆಳಕಿಗೆ ಬಂದಿದೆ. ಉಡುಗೊರೆಗಳ ವಿವರವನ್ನು ಪಡೆದಾಗ ಹೋಮ್ ಥೀಯೇಟರ್ ನೀಡಿರುವುದು ವಧುವಿನ ಮಾಜಿ ಪ್ರಿಯಕರ ಎಂದು ತಿಳಿದು ಬಂದಿದೆ.
ವಧುವಿನ ಮಾಜಿ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರ್ಜು ಎಂಬ ಯುವಕ ತಾನೇ ಹೋಮ್ ಥಿಯೇಟರ್ ಯೊಳಗೆ ಸ್ಫೋಟಕವನ್ನಿಟ್ಟಿದ್ದಾಗಿಯೂ ತಾನು ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬನ ಜೊತೆ ವಿವಾಹವಾಗಿದ್ದರಿಂದ ಈ ರೀತಿ ಮಾಡಿದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ಈ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.