ಬಿಜೆಪಿ ಸರಕಾರ ಬಂದ ಬಳಿಕ ಜನರಿಗೆ ನೆಮ್ಮದಿಯಿಲ್ಲದಂತಾಗಿದೆ: ಬೆಲೆ ಏರಿಕೆ ಇದೇ ರೀತಿ ಮುಂದುವರೆದರೆ ದೇಶದ ಜನ ದಂಗೆ ಏಳುವ ಕಾಲ ದೂರವಿಲ್ಲ-ಉಪ್ಪಿನಂಗಡಿ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಮರೋಳಿ
ಉಪ್ಪಿನಂಗಡಿ: ಪ್ರಜೆಗಳ ಧ್ವನಿಯನ್ನು ಆಲಿಸಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ರಾಜ್ಯಾದ್ಯಂತ ಕೈಗೊಂಡಿದೆ. ಜನರು ಯಾವುದೆಲ್ಲಾ ಸಮಸ್ಯೆಗಳಿಂದ ನಲುಗುತ್ತಿದ್ದಾರೆ, ರಾಜ್ಯದ ಬಿಜೆಪಿ ಸರಕಾರ ಬಂದ ಬಳಿಕ ಜನರಿಗೆ ನೆಮ್ಮದಿಯಿಲ್ಲದಂತಾಗಿದೆ. ಇವೆಲ್ಲವನ್ನು ಅಧ್ಯಯನ ಮಾಡುವ ದೃಷ್ಟಿಯಿಂದ ಜನರ ಬಳಿ ಕಾಂಗ್ರೆಸ್ ತೆರಳುತ್ತಿದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಮಾ.11ರಂದು ನಡೆದ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದಲ್ಲಿ ಜನ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಕಂಗಾಲಾಗಿ ಹೋಗಿದ್ದಾರೆ. ಬಿಜೆಪಿ ಸರಕಾರವನ್ನು ಬದಲಾಯಿಸುವುದೇ ಇದಕ್ಕಿರುವ ಪರಿಹಾರ ಮಾರ್ಗವಾಗಿದೆ ಎಂದು ಅವರು ಹೇಳಿದರು.
ದೀಪದ ಎಣ್ಣೆಯಿಂದ ಹಿಡಿದು ಉಪ್ಪು ವರೆಗೂ ಬೆಲೆ ಏರಿಕೆ ಮಾಡಿ ಮಧ್ಯಮ ಹಾಗೂ ಬಡ ವರ್ಗದ ಅನ್ನಕ್ಕೂ ಕಲ್ಲು ಹಾಕುವ ಕೆಲಸವನ್ನು ಮಾಡಿದ್ದೇ ಮೋದಿ ನೇತೃತ್ವದ ಬಿಜೆಪಿ ಸರಕಾರದ ಸಾಧನೆ ಎಂದು ಹೇಳಿದರು.
ಅಭಿವೃದ್ದಿ ಬಗ್ಗೆ ಮಾತನಾಡಬೇಡಿ, ರಸ್ತೆ ಉದ್ಯೋಗ, ಮನೆ ಕೇಳಬೇಡಿ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕರೆ ನೀಡಿದ್ದು ಲವ್‌ಜಿಹಾದ್ ಎನ್ನುವುದು ನಳಿನ್ ಕುಮಾರ್ ಅವರ ಖಾಸಗಿ ವಿಚಾರವಾಗಿದೆ ಎಂದು ಸುಧೀರ್ ಕುಟುಕಿದರು.
ಕೇಂದ್ರದ ವಿರುದ್ದ ಪ್ರತಿಭಟನೆ ಮಾಡಿದ ವ್ಯಂಗ್ಯ ಚಿತ್ರಕಾರರನ್ನು, ಭಾಷಣಗಾರರನ್ನು, ಪತ್ರಕರ್ತರನ್ನು, ಚಿಂತಕರನ್ನು, ರಾಜಕೀಯ ಮುಖಂಡರನ್ನು ಬಂಧಿಸಿ ಜೈಲಿಗಟ್ಟಿದೆ. ಸರಕಾರದ ವಿರುದ್ದ ಯಾರೂ ಮಾತನಾಡಬಾರದು ಎಂಬ ಧೋರಣೆ ಸಂವಿಧಾನಕ್ಕೆ ವಿರುದ್ದವಾಗಿದೆ ಎಂದು ಅವರು ಹೇಳಿದರು.
ಬೆಲೆ ಏರಿಕೆ ಇದೇ ರೀತಿ ಮುಂದುವರೆದರೆ ದೇಶದಲ್ಲಿ ಜನ ದಂಗೆ ಏಳುವ ಕಾಲ ದೂರವಿಲ್ಲ. ಜನರ ಸಂಕಷ್ವನ್ನು ಮನಗಂಡು ಕಾಂಗ್ರೆಸ್ ಜಾತಿ, ಮತ, ಧರ್ಮ ಬೇದವಿಲ್ಲದೆ ಎಲ್ಲಾ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯಡಿ ತಿಂಗಳಿಗೆ ತಲಾ 2000 ಗೌರವ ಧನ ಕೊಡುವ ಮತ್ತು 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವ ಭರವಸೆಯನ್ನು ನೀಡಿದೆ. ಆ ಹಣದಿಂದ ಪ್ರತೀ ಕುಟುಂಬ ಆಹಾರ ಧಾನ್ಯಗಳನ್ನು ಖರೀದಿಸಿ ನೆಮ್ಮದಿಯಿಂದ ಇರಲಿ ಎಂಬುದು ಕಾಂಗ್ರೆಸ್ ಆಶಯವಾಗಿದೆ ಎಂದು ಸುಧೀರ್ ಹೇಳಿದರು. ಇದೇ ವೇಳೆ ಮೃತಪಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವ ನಾರಾಯಣ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರುಗಳಾದ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅಶೋಕ್ ರೈ ಕೋಡಿಂಬಾಡಿ, ಕೃಪಾ ಅಮರ್‌ಆಳ್ವ, ಜೋಕಿಂ ಡಿಸೋಜಾ, ಕೆ ಕೆ ಸಾಹುಲ್ ಹಮೀದ್, ಅಬ್ದುಲ್ ರಹಿಮಾನ್ ಯುನಿಕ್, ಅಶ್ರಫ್ ಬಸ್ತಿಕ್ಕಾರ್, ಪ್ರಸಾದ್ ಕೌಶಲ್ ಶೆಟ್ಟಿ, ಮುರಳೀಧರ್ ರೈ ಮಠಂತಬೆಟ್ಟು, ಉಪ್ಪಿನಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್‌ರಹಿಮಾನ್, ಗ್ರಾಪಂ ಸದಸ್ಯ ಯು ಟಿ ತೌಸೀಫ್, ಇರ್ಷಾದ್ ಯು ಟಿ, ಅನಸ್ ಉಪ್ಪಿನಂಗಡಿ, ಸಿದ್ದಿಕ್ ಕೆಂಪಿ, ಮಿತ್ರದಾಸ್ ರೈ ಪೆರ್ನೆ,ವೆಂಕಪ್ಪ ಪೂಜಾರಿ, ಸುನಿಲ್ ಪೆರ್ನೆ, ಫಯಾಝ್ ಯು ಟಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.