ರಾಜ್ಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾದ ಕಮಿಷನ್ ದಂಧೆ
ಶಾಸಕ ತಿಪ್ಪಾರೆಡ್ಡಿಗೆ ರೂ.90 ಲಕ್ಷ ಕಮಿಷನ್ ನೀಡಿದ್ದೇನೆ-ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಗಂಭೀರ ಆರೋಪ
ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ 40% ಕಮಿಷನ್ ಚರ್ಚೆ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರಿಗೆ ಕಳೆದ ಮೂರು ವರ್ಷಗಳಲ್ಲಿ ರೂ.90 ಲಕ್ಷ ಕಮಿಷನ್ ನೀಡಿದ್ದೇನೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಕಮಿಷನ್‌ಗೆ ಸಂಬಂಧಿಸಿದಂತೆ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ತಮ್ಮ ಮಧ್ಯೆ ನಡೆದ ಮಾತುಕತೆಯ ಆಡಿಯೊವೊಂದನ್ನು ಅವರು ಬಿಡುಗಡೆ ಮಾಡಿದ್ದು ರೂ.90 ಲಕ್ಷ ಮೊತ್ತವನ್ನು ನಗದು ರೂಪದಲ್ಲಿ ನೀಡಿದ್ದೇನೆ. ಕಾಮಗಾರಿ ಆರಂಭಿಸುವ ಮುನ್ನವೇ ಕಮಿಷನ್ ಕೇಳುತ್ತಿದ್ದಾರೆ ಎಂದು ತಿಪ್ಪಾರೆಡ್ಡಿ ವಿರುದ್ಧ ಆರೋಪ ಮಾಡಿದ್ದಾರೆ.
ನನಗೆ ಕೆಲಸ ಕೊಡಬೇಡಿ ಎಂದು ಮುಖ್ಯ ಎಂಜಿನಿಯರ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಶಾಸಕ ತಿಪ್ಪಾರೆಡ್ಡಿ ಹೇಳಿರುವ ಉದಾಹರಣೆಗಳಿವೆ. ಅವರ ಸಂಬಂಧಿಕರೋರ್ವರಿಗೆ ಮಾತ್ರ ಕೆಲಸ ಕೊಡಿ ಎಂದು ಹೇಳಿದ್ದಾರೆ. ಗುತ್ತಿಗೆದಾರರಿಗೆ ಚಿತ್ರಹಿಂಸೆ ಕೊಡುವುದೇ ಇವರ ಉದ್ದೇಶ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ನಾನು ಮಾಡುತ್ತಿರುವ ಆರೋಪದಿಂದ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗಿದ್ದೇವೆ. ಗುತ್ತಿಗೆದಾರರಾಗಿದ್ದ ಸಂತೋಷ್ ಪಾಟೀಲ್‌ಗಾದ ರೀತಿ ನನಗೂ ಆಗಬಹುದು ಅಥವಾ ಆಗದಿರಬಹುದು. ಇದರ ಅರಿವು ಇರುವುದರಿಂದಲೇ ಆಡಿಯೊ ಬಿಡುಗಡೆ ಮಾಡಿದ್ದೇನೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಶಾಸಕ ತಿಪ್ಪಾರೆಡ್ಡಿ. ರೂ.1 ಕೋಟಿಗೆ 10 ಲಕ್ಷ ಕಮಿಷನ್ ಅನ್ನು ಶಾಸಕರಿಗೆ ನೀಡಿದ್ದೇನೆ. ಸ್ವಲ್ಪ ಮೊತ್ತವನ್ನು ಎಂಜಿನಿಯರ್ ಮೂಲಕವೂ ನೀಡಲಾಗಿದೆ. ಕಳೆದ ಡಿಸೆಂಬರ್ 27ರಂದು ರೂ.30 ಲಕ್ಷ ಮುಂಗಡ ಕಮಿಷನ್ ಕೇಳಿದ್ದರು. ನನ್ನ ಈ ಎಲ್ಲ ಆರೋಪಗಳೂ ಧರ್ಮಸ್ಥಳದ ಮಂಜುನಾಥನ ಆಣೆಯಾಗಿಯೂ ಸತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.