ಬಂಟ್ವಾಳ: ಹಿಂದೂ ಸಂಘಟನೆಯ ಮುಖಂಡನ ಶವ ನೇತ್ರಾವತಿ ನದಿಯಲ್ಲಿ ಪತ್ತೆ
ಪಾಣೆಮಂಗಳೂರು ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಜ.12ರಂದು ಬೆಳಿಗ್ಗೆ ನಡೆದಿದೆ.
ಮೃತಪಟ್ಟವರು ಬಂಟ್ವಾಳ ತಾಲೂಕಿನ ಸಜೀಪ ನಿವಾಸಿ, ಹಿಂದೂ ಸಂಘಟನೆ ಮುಖಂಡ ರಾಜೇಶ್ ಪೂಜಾರಿ ಎಂದು ತಿಳಿದುಬಂದಿದೆ. ರಾಜೇಶ್ ಪೂಜಾರಿ ಅವರ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ದ್ವಿಚಕ್ರ ವಾಹನವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಸಂಶಯಗೊಂಡು ಪಾಣೆಮಂಗಳೂರು ಸೇತುವೆಯಲ್ಲಿ ಸಂಚರಿಸುವ ವಾಹನ ಸವಾರರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ನೇತ್ರಾವತಿ ನದಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ತಂಡ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಬಳಿಕ ರಾಜೇಶ್ ಪೂಜಾರಿಯ ಮೃತದೇಹ ಪತ್ತೆಯಾಗಿದೆ.
ಆದರೆ ಮೃತದೇಹ ಪತ್ತೆಯಾದ ಬಳಿಕ ಸಾರ್ವಜನಿಕ ರಲ್ಲಿ ಸಾವಿನ ಬಗ್ಗೆ ಊಹಾಪೋಹಗಳು ಸಂದೇಹಗಳು ಹುಟ್ಟಿಕೊಂಡಿದೆ.
ರಾಜೇಶ್ ಅವರು ಸಜೀಪ ಮನೆಯಿಂದ ಬರುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ಹಳೆಯ ಪಾಣೆಮಂಗಳೂರು ಸೇತುವೆಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ನೇತ್ರಾವತಿ ನದಿಗೆ ಬಿದ್ದು ಸಾವನ್ನಪ್ಪಿರಬಹುದಾ? ಎಂಬ ಸಂದೇಹ ವ್ಯಕ್ತವಾಗಿದೆ.
ದ್ವಿಚಕ್ರ ವಾಹನ ಅಪಘಾತವಾದ ಬಗ್ಗೆ ಸಂಶಯಗಳು ವ್ಯಕ್ತವಾಗಿದ್ದು, ಪೋಲಿಸರು ತನಿಖೆ ಆರಂಭಿಸಿದ್ದಾರೆ.
ಅಥವಾ ಸಾವಿಗೆ ಇನ್ನಾವುದೋ ಕಾರಣವಿರಬಹುದಾ? ಎಂಬ ಬಗ್ಗೆಯೂ ಪೋಲೀಸರು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.