ಸುಳ್ಯದ ಜನತೆಯ ಬಹಳ ವರ್ಷದ ಬೇಡಿಕೆಯ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಗೆ ಶಿಲಾನ್ಯಾಸ: ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ: ಸಚಿವ ವಿ.ಸುನಿಲ್ ಕುಮಾರ್ ಭರವಸೆ
ಸುಳ್ಯದ ಬಹುಕಾಲದ ಬೇಡಿಕೆಯಾಗಿರುವ 110 ಕೆ.ವಿ. ವಿದ್ಯುತ್ ಉಪ ಕೇಂದ್ರ ಹಾಗೂ 110 ಕೆ.ವಿ. ಮಾಡಾವು – ಸುಳ್ಯ, ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಗೆ ಸುಳ್ಯದಲ್ಲಿ ಇಂಧನ ಸಚಿವ ವಿ ಸುನಿಲ್ ಕುಮಾರ್ ಶಂಕುಸ್ಥಾಪನೆ ನೆರವೇರಿಸಿದರು.
ಸುಳ್ಯ ನಗರದ ಮೆಸ್ಕಾಂ ಕಚೇರಿಯ ಹಿಂಬದಿಯ ಜಾಗದಲ್ಲಿ ಸಬ್‌ಸ್ಟೇಶನ್ ನಿರ್ಮಾಣವಾಗಲಿದ್ದು ಇದರ ಪೂಜಾ ಕಾರ್ಯಗಳು ನೆರವೇರಿದವು.
ಬಳಿಕ ಇಂಧನ ಸಚಿವ ವಿ.ಸುನಿಲ್ ಕುಮಾರ್ ಹಾಗೂ ಮೀನುಗಾರಿಕಾ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಸಚಿವ ವಿ.ಸುನಿಲ್ ಕುಮಾರ್‌ರವರು ಮಾತನಾಡಿ, ‘110ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಸುಳ್ಯದ ಬಹಳ ವರ್ಷದ ಬೇಡಿಕೆ. ನಾನು ಇಂಧನ ಸಚಿವನಾಗಿ ಮೊದಲ ಬಾರಿಗೆ ಸುಳ್ಯಕ್ಕೆ ಬಂದಂತ ಸಂದರ್ಭದಲ್ಲಿ ಈ ಕುರಿತು ನನ್ನ ಗಮನಕ್ಕೆ ತಂದರು. ನಾನು ಇಂಧನ ಸಚಿವನಾಗುವ ಮೊದಲು ಈ ಕುರಿತು ವ್ಯಾಪಾಕ ಚರ್ಚೆಗಳು ನಡೆದಿತ್ತು. ರಸ್ತೆಯಲ್ಲಿ ಹೋಗುವವರೆಲ್ಲರೂ 110 ಕೆ.ವಿ. ಸಬ್‌ಸ್ಟೇಶನ್ ಬೇಕು ಎನ್ನುವಷ್ಟರ ಮಟ್ಟಿಗೆ ಚರ್ಚೆಗಳು ಆಗಿದೆ. ಎಲ್ಲ ಕಡೆಯಲ್ಲಿಯೂ ಈ ರೀತಿಯ ಕೂಗು ವ್ಯಕ್ತವಾಗುತ್ತಿರುವುದರಿಂದ ಅಂದಿನ ಸಭೆಯಲ್ಲೇ ನಾನು ಸಚಿವ ಅಂಗಾರರ ಸಮ್ಮುಖದಲ್ಲೇ ನಮ್ಮ ಸರಕಾರದ ಅವಧಿ ಮುಕ್ತಾಯವಾಗುವ ಒಳಗೆ ಇದಕ್ಕಿರುವ ಎಲ್ಲ ತಾಂತ್ರಿಕ ಅಡೆತಡೆಗಳನ್ನು ಮುಗಿಸಿಕೊಂಡು ಕಾಮಗಾರಿಗೆ ಗುದ್ದಲಿಪೂಜೆ ಮಾಡುತ್ತೇವೆಂದು ಒಂದೂ ಕಾಲು ವರ್ಷದ ಹಿಂದೆ ಹೇಳಿದ್ದೆ. ಇವತ್ತು ಆ ಮಾತನ್ನು ಉಳಿಸಿಕೊಂಡಿದ್ದೇನೆ ಎಂದರು.
46 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು ಒಂದು ವರ್ಷದಲ್ಲಿ ಈ ಕಾಮಗಾರಿಯಲ್ಲಿ ಮುಗಿಸಬೇಕೆಂದು ಅಧಿಕಾರಿಗಳಿಗೆ ನಾವು ಸೂಚನೆ ಕೊಟ್ಟಿದ್ದು ವಾರದೊಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಅವರು ಹೇಳಿದರು.
ಸಚಿವ ಎಸ್.ಅಂಗಾರರು ಅಧ್ಯಕ್ಷತೆ ವಹಿಸಿ, 110ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್ ಇಲ್ಲಿ ಅಗತ್ಯವಿತ್ತು. ಆದರೆ ಅರಣ್ಯ ಸಮಸ್ಯೆ ಇದ್ದುದರಿಂದ ಆಗಿರಲಿಲ್ಲ. ನಮ್ಮ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿಯವರೇ ಇಂಧನ ಸಚಿವರಾದರು. ನಾವು ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಿ ಎಲ್ಲ ತೊಂದರೆಗಳನ್ನು ನಿಭಾಯಿಸಿಕೊಂಡು ಇಂದು ಗುದ್ದಲಿಪೂಜೆ ನೆರವೇರಿಸಿದ್ದೇ ವೆ. ಕಾಮಗಾರಿ ಆಗುತ್ತದೆಯೋ ಎಂಬ ಅಪನಂಬಿಕೆ ಯಾರಿಗೂ ಬೇಡ. ಕ್ಷೇತ್ರದ ಅಭಿವೃದ್ಧಿ ನಮ್ಮದೇ ಜವಾಬ್ದಾರಿ” ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಶುಭ ಹಾರೈಸಿದರು. ಮೀನುಗಾರಿಗಾ ನಿಗಮಾಧ್ಯಕ್ಷ ಎ.ವಿ. ತೀರ್ಥರಾಮ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ್, ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ಮೆಸ್ಕಾಂ ವ್ಯವಸ್ಥಾಪಕಾ ನಿರ್ದೇಶಕ ಮಂಜಪ್ಪ, ಮೆಸ್ಕಾಂ ಅಧೀಕ್ಷಕ ಶ್ರೀಮತಿ ಪುಷ್ಪಾ, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್,. ಕುಮಾರ್ ನಾಯಕ್ ಮಂಜುನಾಥ್ ಶ್ಯಾನುಭಾಗ್ ವೇದಿಕೆಯಲ್ಲಿದ್ದರು.
ಕೆಪಿಟಿಸಿಎಲ್ ಅಧೀಕ್ಷಕ ಇಂಜಿನಿಯರ್ ರವಿಕಾಂತ್ ಆರ್ ಕಾಮತ್ ಸ್ವಾಗತಿಸಿದರು. ಕಾರ್ಯ ನಿರ್ವಾಹಕ ಇಂಜಿಯರ್ ಗಂಗಾಧರ ಕೆ. ವಂದಿಸಿದರು. ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.