14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಳವೆ ಬಾವಿಗೆ ತಳ್ಳಿದ ಕಿರಾತಕರು
14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಬಳಿಕ ಆಕೆಯನ್ನು ಕೊಳವೆ ಬಾವಿಗೆ ತಳ್ಳಿರುವ ಪ್ರಕರಣ ಉತ್ತರ ಪ್ರದೇಶದ ಮೌ ಜಿಲ್ಲೆಯ ಘೋಷಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವರದಿಯಾಗಿದೆ.

ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮತ್ತೊಬ್ಬನಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕಸ ಎಸೆಯಲು ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಬಾಲಕಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೆ ಯತ್ನಿಸಲಾಗಿದೆ. ಈ ವೇಳೆ ಅಲ್ಲಿದ್ದ ಕೆಲವು ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಮಗಳನ್ನು ರಕ್ಷಿಸಲಾಗಿದೆ ಎಂದು ಸಂತ್ರಸ್ತ ಬಾಲಕಿಯ ತಂದೆ ದೂರು ನೀಡಿದ್ದಾರೆ.
ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಕೊಳವೆ ಬಾವಿಯಲ್ಲಿ, ಕೈ–ಕಾಲುಗಳಿಗೆ ಹಗ್ಗ ಕಟ್ಟಿದ ಹಾಗೂ ಬಾಯಿಗೆ ಬಟ್ಟೆ ತುರುಕಿದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.