ಹೈದರಾಬಾದ್: ಕಾರು ಡಿಕ್ಕಿ ಹೊಡೆದು ಕೇರಳ ಮೂಲದ ಯುವ ಪತ್ರಕರ್ತೆ ಸಾವು
ಹೈದರಾಬಾದ್: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಯುವ ಪತ್ರಕರ್ತೆಯೊಬ್ಬರು ಸಾವನ್ನಪ್ಪಿದ್ದಾರೆ. ಹೈದರಾಬಾದ್ ಹೊರವಲಯದ ಹಯಾತ್ ನಗರ ಸಮೀಪದ ಭಾಗ್ಯಲತಾ ಎಂಬಲ್ಲಿ ಈ ದುರಂತ ಸಂಭವಿಸಿದೆ.
ಪತ್ರಕರ್ತೆ ನಿವೇದಿತಾ ಸೂರಜ್ ಬೆಳಿಗ್ಗೆ 5 ಗಂಟೆಗೆ ಕಚೇರಿಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ನಿವೇದಿತಾ ಸೂರಜ್ ರವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ನಿವೇದಿತಾ ಸೂರಜ್ ಜೊತೆಯಲ್ಲಿದ್ದ ಮತ್ತೊಬ್ಬ ಪತ್ರಕರ್ತೆ ಸೋನಾಲಿ ಚಾವ್ರೆ ಗಂಭೀರವಾಗಿ ಗಾಯಗೊಂಡಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದೆ.
ನಿವೇದಿತಾ ಈಟಿವಿ ಭಾರತ್ ಮಲೆಯಾಳಂ ವೆಬ್ ಸೈಟ್ ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಮೂಲತ: ಕೇರಳದ ತ್ರಿಶ್ಯೂರ್ ನವರಾಗಿದ್ದಾರೆ.