ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ ಮಾಡಿದರು!
ಟ್ಯಾಂಕ್‌ನಿಂದ ನೀರನ್ನು ಹೊರಗೆ ಹರಿಸುತ್ತಿರುವ ದೃಶ್ಯ ವೈರಲ್
ಚಾಮರಾಜನಗರ: ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್ ನಲ್ಲಿಯಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಅದರಲ್ಲಿದ್ದ ನೀರೆಲ್ಲವನ್ನೂ ಶುಕ್ರವಾರ ಮಧ್ಯಾಹ್ನ ಹೊರಕ್ಕೆ ಹರಿಸಿ, ಗೋಮೂತ್ರದಿಂದ ಶುದ್ಧೀಕರಿಸಲಾಗಿದೆ. ಎಲ್ಲ ನಲ್ಲಿಗಳಿಂದಲೂ ನೀರನ್ನು ಹರಿಸುತ್ತಿರುವ ಫೋಟೋ ವಿಡಿಯೊ ವೈರಲ್ ಆಗಿದೆ.
ಘಟನೆಯು ತಾಲ್ಲೂಕು ಆಡಳಿತದ ಗಮನಕ್ಕೆ ಬಂದಿದ್ದು, ಸ್ಥಳೀಯ ಕಂದಾಯ ನಿರೀಕ್ಷಕ ಸೇರಿದಂತೆ ಅಧಿಕಾರಿಗಳು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ತಹಶೀಲ್ದಾರ್‌ಗೆ ವರದಿ ನೀಡಿದ್ದಾರೆ.
‘ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನ ಮದುವೆ ಶುಕ್ರವಾರ ಗ್ರಾಮದಲ್ಲಿ ನಡೆದಿತ್ತು. ವಧುವಿನ ಕಡೆಯವರು ಎಚ್.ಡಿ.ಕೋಟೆ ತಾಲ್ಲೂಕಿನ ಸರಗೂರಿನಿಂದ ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿ ಬಸ್‌ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಲಿಂಗಾಯತರ ಬೀದಿಯಲ್ಲಿರುವ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿದ್ದಾರೆ. ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ಆಕೆಗೆ ಬೈದಿದ್ದಾರೆ. ನಂತರ ಎಲ್ಲ ನಲ್ಲಿಯನ್ನು ತೆರೆದು ನೀರು ಖಾಲಿ ಮಾಡಿ ಗಂಜಲ ಹಾಕಿ ಸ್ವಚ್ಛಗೊಳಿಸಿದ್ದಾರೆ ಎನ್ನಲಾಗಿದೆ.
ಶನಿವಾರ ಕಂದಾಯ ನಿರೀಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ 20ಕ್ಕೂ ಯುವಕರು ಘಟನೆ ನಡೆದಿರುವ ಬಗ್ಗೆ ಲಿಖಿತವಾಗಿ ದೃಢಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.