ಕಳ್ಳತನಕ್ಕೆಂದು ನುಗ್ಗಿದ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಕಳ್ಳ!
ಬೆಂಗಳೂರು: ಕಳ್ಳತನಕ್ಕೆ ಮನೆಗೆ ನುಗ್ಗಿದ ಕಳ್ಳ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದಿರಾನಗರದಲ್ಲಿ ನಡೆದಿದೆ. ದಿಲೀಪ್ ಬಹದ್ದೂರ್ ಆತ್ಮಹತ್ಯೆ ಮಾಡಿಕೊಂಡಿರುವ ಕಳ್ಳ ಎಂದು ಗುರುತಿಸಲಾಗಿದೆ.

ಮನೆಯ ಮಾಲೀಕ ಮನೆಗೆ ಬೀಗ ಹಾಕಿಕೊಂಡು ಯೂರೋಪ್ ಪ್ರವಾಸ ಹೋಗಿದ್ದರು. ಈ ವೇಳೆ ಮನೆಗೆ ನುಗ್ಗಿದ ದಿಲೀಪ್ ಅಲ್ಲೇ ಮುಂಜಾನೆಯಿಂದ ಸಂಜೆವರೆಗೂ ವಾಸ್ತವ್ಯ ಹೂಡಿ ಬಾತ್ ರೂಮ್ ನಲ್ಲಿ ಸ್ನಾನ ಮಾಡಿ ಇಡೀ ಮನೆಯನ್ನು ಜಾಲಾಡಿದ್ದಾನೆ. ಸಂಜೆ ಆಗುತ್ತಿದ್ದಂತೆ ಯುರೋಪ್ ಪ್ರವಾಸ ಮುಗಿಸಿ ಮನೆಯ ಮಾಲೀಕ ಮನೆಗೆ ಮರಳಿದ್ದಾರೆ ಎನ್ನಲಾಗಿದೆ.
ಮನೆಯವರು ಒಳಬರುತ್ತಿದ್ದಂತೆ ಆತಂಕಗೊಂಡು ದೇವರ ಕೋಣೆ ಮುಂದೆ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಇಂದಿರಾನಗರ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.