ಭಯೋತ್ಪಾದನೆಯ ದಮನಕ್ಕೆ ಸಜ್ಜು: ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಬೊಮ್ಮಾಯಿ
ಬೆಂಗಳೂರು: ಭಯೋತ್ಪಾದನೆಯ ದಮನಕ್ಕೆ ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳ ಅಗತ್ಯವಿದ್ದು, ಅದಕ್ಕಾಗಿ ತರಬೇತಿ ಪಡೆದ ಪ್ರತ್ಯೇಕ ಕಮಾಂಡ್ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಭಯೋತ್ಪಾದನೆಯ ವಿರುದ್ಧ ಹಿರಿಯ ಅಧಿಕಾರಿಗಳ ಜತೆಗೆ ಕಾನ್‌ಸ್ಟೆಬಲ್ ಹಂತದವರೆಗಿನ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡಬೇಕು. ಸಮಾಜದ ಎಲ್ಲ ದುಷ್ಟ ಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸಬೇಕು. ಕರ್ನಾಟಕ ಪೊಲೀಸರು ಹಲವು ಘಟನೆಗಳಲ್ಲಿ ದಿಟ್ಟ ಹೋರಾಟ ನಡೆಸಿದ್ದಾರೆ. ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ದೇಶ ಹಾಗೂ ವಿದೇಶಿ ದುಷ್ಟಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡಲು ನಡೆಸುತ್ತಿರುವ ಪ್ರಯತ್ನ ಮಟ್ಟಹಾಕಬೇಕು. ಅಪರಾಧಗಳ ಸಾಧ್ಯತೆ ಗ್ರಹಿಸಬೇಕು. ಅದಕ್ಕೆ ಅಗತ್ಯವಾದ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಶಾಂತಿ, ಸುವ್ಯವಸ್ಥೆಗೆ ಸದಾ ಶ್ರಮಿಸುವ ಪೊಲೀಸರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ. ಪೊಲೀಸರ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಪ್ರತಿ ವರ್ಷ ಸರಾಸರಿ ಐದು ಸಾವಿರ ನೇಮಕವಾಗುತ್ತಿದೆ. ಹೊಸ ತಂತ್ರಜ್ಞಾನದ ಪರಿಚಯ, ಸೈಬರ್ ಅಪರಾಧಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಪೊಲೀಸರ ತ್ಯಾಗ, ಬಲಿದಾನ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸಲು ಪೊಲೀಸ್ ವಸ್ತುಸಂಗ್ರಹಾಲಯ ಆರಂಭಿಸಲಾಗಿದೆ. ಮೃತ ಪೊಲೀಸರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.