ವಾಚ್ ಪೇ ಪಿಲ್ಲೋ ಪೇ ಮೂಲಕ ಪಡೆದ ಲಂಚವೆಷ್ಟು: ಕಾಂಗ್ರೆಸ್ ಕಾಲೆಳೆದ ಬಿಜೆಪಿ
ಬೆಂಗಳೂರು: ‘ಟಾಯ್ಲೆಟ್ ಚೊಂಬಿನಲ್ಲಿ ಲಂಚ, ಹಾಸ್ಟೆಲ್ ದಿಂಬಿನಲ್ಲಿ ಲಂಚ, ‘ವಾಚ್ ಪೇ’ ಮೂಲಕವೂ ನೀವು ಪಡೆದ ಲಂಚ ಎಷ್ಟು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ತಮ್ಮ ಎಲ್ಲ ಹಗರಣಗಳನ್ನು ಮುಚ್ಚಿ ಹಾಕಲು ಸಿದ್ದರಾಮಯ್ಯ ಲೋಕಾಯುಕ್ತ ಮುಚ್ಚಿ, ಎಸಿಬಿ ರಚಿಸಿಕೊಂಡರು. ಎಸಿಬಿ ಮೂಲಕ ತಮ್ಮ ಎಲ್ಲಾ ಹಗರಣಗಳಿಗೆ ‘ಬಿ’ ರಿಪೋರ್ಟ್ ಹಾಕಿಸಿಕೊಂಡ ಧೀರ ಎಂದರೆ ಅದು ಸಿದ್ದರಾಮಯ್ಯ. ನಿಷ್ಪಕ್ಷಪಾತ ತನಿಖೆ ನಡೆಸುವ ಲೋಕಾಯುಕ್ತವನ್ನು ಅನುಮಾನಿಸಿದ್ದೇಕೆ’ ಎಂದು ಕೇಳಿದೆ.
‘ಸಿದ್ದರಾಮಯ್ಯ ಅವರೇ ಯಾವ ಕಾರಣಕ್ಕಾಗಿ ನಿಮಗೆ ದುಬಾರಿ ವಾಚ್ ಉಡುಗೊರೆ ಸಿಕ್ಕಿದ್ದು? ನೀವು ‘ವಾಚ್ ಪೇ’ ಮೂಲಕ ಪಡೆದ ಲಂಚವೆಷ್ಟು? ಪರಿಶಿಷ್ಟರ ಮತ್ತು ಹಿಂದುಳಿದ ವರ್ಗಗಳ ಹಾಸ್ಟೆಲ್ ಅನುದಾನ ಕಬಳಿಸಿದವರು ನಿಮ್ಮ ಸಂಪುಟದಲ್ಲಿ ಸಚಿವರಾಗಿದ್ದು ಮರೆತು ಹೋಯಿತೆ? ‘ಪಿಲ್ಲೋ ಪೇ’ ಹಗರಣದ ಸೂತ್ರಧಾರರು ನೀವೇ ಅಲ್ವೇ’ ಎಂದೂ ಪ್ರಶ್ನಿಸಿದೆ.
‘ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಸೋಲಾರ್ ಹಗರಣದಲ್ಲಿ ‘ಲಕ್ಷ್ಮಿಭಾಗ್ಯ’ ಪಡೆದಿದ್ದು ಯಾರು? ಸಂಬಂಧಿಕರೇ ಸೋಲಾರ್ ಉತ್ಪಾದಕರಾಗಿದ್ದು ಯಾರ ಕೃಪೆಯಿಂದ? ಈ ಹಗರಣದಲ್ಲಿ ‘ಲಕ್ಷ್ಮಿ ಪೇ’ಯಿಂದ ಎಷ್ಟು ಲಂಚ ‘ಪೇ ಡಿಕೆ’ ಆಗಿದೆ? ಮೌನವೇಕೆ’ ಎಂದೂ ಬಿಜೆಪಿ ಕಾಲೆಳೆದಿದೆ.





