ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆ: ಸಾವಿರಾರು ಮಂದಿ ಭಾಗಿ
ಮಂಗಳೂರು: ಸುರತ್ಕಲ್ ಟೋಲ್ ಅನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಎನ್ ಐಟಿಕೆ ಬಳಿ ಸಾವಿರಾರು ಜನ ಜಮಾವಣೆಗೊಂಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಟೋಲ್ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಹೋರಾಟಗಾರರನ್ನು ತಡೆಯಲು ಮುಂದಾದಾಗ ಆಕ್ರೋಶಗೊಂಡ ಹೋರಾಟಗಾರರು ಬ್ಯಾರೀಕೇಡ್ ನ್ನು ತಳ್ಳಿ ಮುಂದಕ್ಕೆ ಸಾಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಪ್ರತಿಭಟನೆ ಆರಂಭವಾಗುತ್ತಿದ್ದಂತೆ ನೂರಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಹೋರಾಟಗಾರರು ಟೋಲ್ ನಲ್ಲಿ ಸುಲಿಗೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರವನ್ನು ಕೂಗಿದ್ದಾರೆ.
ಸುರತ್ಕಲ್ ಟೋಲ್ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಮಾಜಿ ಶಾಸಕರಾದ ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಮಿಥುನ್ ರೈ, ಶಶಿಧರ್ ಹೆಗ್ಡೆ, ಬಿ.ಕೆ.ಇಮ್ತಿಯಾಝ್ ಮೊದಲಾದವರು ಹೋರಾಟಕ್ಕೆ ನೇತೃತ್ವ ನೀಡಿದ್ದರು.

ಟೋಲ್ ಗೇಟ್ ಬಳಿ 10 ಕೆಎಸ್ಆರ್ ಪಿ ತುಕಡಿಗಳು, ಐದು ಸಿಆರ್ ಪಿಎಫ್ ತುಕಡಿಗಳು ಸೇರಿದಂತೆ 450 ಪೊಲೀಸ್ ಕಾನ್ಸ್ ಸ್ಟೆಬಲ್ ಹಾಗೂ 40 ಮಂದಿ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.