ಎಸ್.ಎನ್.ಇ.ಸಿ. ಪ್ರವೇಶ ಪರೀಕ್ಷೆ:
ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಣ ಅನಿವಾರ್ಯ-ಕೆ.ಪಿ. ಅಹ್ಮದ್ ಹಾಜಿ
ಪುತ್ತೂರು: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ವ್ಯಕ್ತಿಯ ಉಜ್ವಲ ಭವಿಷ್ಯವನ್ನು ರೂಪಿಸಲು ಶಿಕ್ಷಣ ಅನಿವಾರ್ಯ ಆದ್ದರಿಂದ ಪ್ರತಿಯೊಬ್ಬರೂ ಇದರ ಮಹತ್ವವನ್ನು ಅರಿತು ಕಾರ್ಯಪ್ರವೃತ್ತರಾಗಬೇಕು ಎಂದು ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ ಆಕರ್ಷಣ್ ಹೇಳಿದರು.

ಅವರು ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ಕರ್ನಾಟಕ ಸೆಂಟರ್ ವತಿಯಿಂದ ‘ಸಮಸ್ತ’ ಸಂಸ್ಥೆಯ ಎಸ್.ಎನ್.ಇ.ಸಿ. ಶರೀಅ ಪ್ಲಸ್ ಸಮನ್ವಯ ಶಿಕ್ಷಣದ 2026-27ನೇ ಸಾಲಿನ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಕಾಲಘಟ್ಟದ ಅಗತ್ಯತೆಗಳಿಗೆ ಅನುಗುಣವಾಗಿ ಹೊಸ ಪಠ್ಯಕ್ರಮಗಳನ್ನು ಅಳವಡಿಸಿಕೊಂಡು ವಿವಿಧ ಶೈಕ್ಷಣಿಕ ಯೋಜನೆಗಳನ್ನು ರೂಪಿಸುತ್ತಿರುವ ‘ಸಮಸ್ತ’ ಸಂಸ್ಥೆಯ ಶೈಕ್ಷಣಿಕ ಸಾಧನೆ ಪ್ರಶಂಸನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾರುಲ್ ಹಸನಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಅವರು ವಹಿಸಿದ್ದರು. ಸಯ್ಯಿದ್ ಯಹ್ಯಾ ತಂಙಳ್ ಸಾಲ್ಮರ ಅವರು ಪ್ರಾರ್ಥನೆಗೆ ನೇತೃತ್ವ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ, ಮೌಂಟನ್ ವ್ಯೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್, ರಿಯಾಝ್ ಇಂಜಿನಿಯರ್ ಪರ್ಲಡ್ಕ, ಉಮರ್ ಹಾಜಿ ಸಂಪ್ಯ, ಅಬ್ದುಲ್ ಕರೀಂ ದಾರಿಮಿ ಕುಂಬ್ರ, ಅಬ್ಬಾಸ್ ದಾರಿಮಿ ಸೇರಿದಂತೆ ಹಲವರು ಶುಭ ಹಾರೈಸಿದರು.
ಎಸ್.ಎನ್.ಇ.ಸಿ.ಯ ಕರ್ನಾಟಕ ಕೋ ಅಡಿನೇಟರ್ ಸ್ವಾಬಿರ್ ಫೈಝಿ ಕಲ್ಲೇಗ, ಹಾಶಿಂ ರಹ್ಮಾನಿ ಸಾಲ್ಮರ , ಅಕ್ಬರ್ ಅಲಿ ಹುದವಿ ವಿಟ್ಲ , ಖಾರೀ ಸಹೀದ್ ಬಾಖವಿ ಮಿತ್ತಬೈಲು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಸಂಸ್ಥೆಯ ವ್ಯವಸ್ಥಾಪಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.

ಮಾಹಿತಿ ಶಿಬಿರದ ನಂತರ ಎಸ್.ಎನ್.ಇ.ಸಿ. ಶರೀಅ ಪ್ಲಸ್ ವಿದ್ಯಾರ್ಥಿಗಳ ಆನ್‌ಲೈನ್ ಪ್ರವೇಶ ಪರೀಕ್ಷೆ ಕೇಂದ್ರೀಯ ಬೋರ್ಡ್ ಮಾರ್ಗದರ್ಶನದಲ್ಲಿ ನಡೆಯಿತು. ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.



