ಸುಳ್ಯ: ಅಕ್ರಮ ಜಾನುವಾರು ಸಾಗಾಟ ಪತ್ತೆ, ಮೂವರು ಆರೋಪಿಗಳ ಬಂಧನ
ಸುಳ್ಯ: ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವೊಂದನ್ನು ಸುಳ್ಯ ಪೊಲೀಸರು ಗುರುವಾರ ಬೆಳಗ್ಗಿನ ಜಾವ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾ.26ರಂದು ಮುಂಜಾನೆ ಸುಳ್ಯ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ.ಪಿ. ಹಾಗೂ ಸಿಬ್ಬಂದಿಗಳು ಆಲೆಟ್ಟಿ ಕ್ರಾಸ್ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ವೇಳೆ ಕೇರಳ ನೋಂದಣಿಯ ಬೊಲೆರೊ ಪಿಕಪ್ ವಾಹನವೊಂದು ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರು ವಾಹನವನ್ನು ಬೆನ್ನಟ್ಟಿ ಆಲೆಟ್ಟಿ ಗ್ರಾಮದ ಮಿತ್ತಡ್ಕ ರೋಟರಿ ಶಾಲೆಯ ಬಳಿ ತಡೆದು ನಿಲ್ಲಿಸಿದ್ದಾರೆ.
ಪೊಲೀಸರು ವಾಹನ ನಿಲ್ಲಿಸುತ್ತಿದ್ದಂತೆಯೇ ಅದರಲ್ಲಿದ್ದ ಓರ್ವ ವ್ಯಕ್ತಿಪರಾರಿಯಾಗಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಾಹನದ ಚಾಲಕ, ಕೇರಳದ ಕಣ್ಣೂರು ನಿವಾಸಿ ಇಸಾಕ್ ಕೆ.ಕೆ (40) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ವಾಹನವನ್ನು ತಪಾಸಣೆ ನಡೆಸಿದಾಗ, ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಕಂಡುಬಂದಿದೆ. ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪರವಾನಿಗೆಗಳು ಚಾಲಕನ ಬಳಿ ಇರಲಿಲ್ಲ. ವಿಚಾರಣೆಯ ವೇಳೆ, ಈ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ತನಿಖೆಯ ವೇಳೆ ಜಾನುವಾರುಗಳನ್ನು ಅಮರ ಪಡನೂರು ಗ್ರಾಮದ ಸಂತೋಷ್ ಎಂ.ಎಸ್ (48) ಎಂಬವರಿಂದ ಖರೀದಿಸಲಾಗಿದ್ದು, ಸುಳ್ಯ ನಿವಾಸಿ ಇಬ್ರಾಹಿಂ ಎ.ಎಂ (32) ಎಂಬವರು ಈ ವ್ಯವಹಾರದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020, ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಬಿ.ಎನ್.ಎಸ್ (BNS) ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಬಂಧಿತ ಮೂವರು ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸru🌀ತಿಳಿಸಿದ್ದಾರೆ.



