ಕರಾವಳಿಕ್ರೈಂ

ಬೆಳ್ಳಾರೆ: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಗೆ ಜೈಲು ಶಿಕ್ಷೆ



ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ಆರೋಪಿಗೆ ಪೋಕ್ಸೋ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳ್ಳಾರೆ ದರ್ಖಾಸು ನಿವಾಸಿ ಎಂ.ಸೆಲ್ವಕುಮಾರ್ ಶಿಕ್ಷೆಗೊಳಗಾದ ಆರೋಪಿ.



ಬೆಳ್ಳಾರೆ ದರ್ಖಾಸು ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದ ಸೆಲ್ವಕುಮಾರ್ 2020ರ ಎ.1ರಂದು ಬಾಲಕಿಗೆ ಚಾಕಲೇಟ್‌ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು.



ಬಳಿಕ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಒಟ್ಟು 17 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಆರೋಪಿ ವಿರುದ್ಧ ಸಂತ್ರಸ್ತ ಬಾಲಕಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.
ನ್ಯಾಯಾಲಯದಲ್ಲಿ ಆರೋಪಿ ವಿರುದ್ದ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಬೆಳ್ಳಾರೆ ಪೊಲೀಸರು ವಿವರವಾದ ಸಾಕ್ಷ್ಯ ನೀಡಿದರು. ನ್ಯಾಯಾಧೀಶೆ ಸರಿತಾ ಡಿ. ಇತ್ತಂಡಗಳ ವಾದ ಆಲಿಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಪೋಕ್ಸೋ ಕಾಯ್ದೆಯಡಿ ಅಪರಾಧಕ್ಕೆ 5 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಶಿಕ್ಷೆ ನೀಡಿ ಆದೇಶಿಸಿದ್ದಾರೆ.
ದಂಡದ ಮೊತ್ತದಲ್ಲಿ ರೂ.20 ಸಾವಿರವನ್ನು ನೊಂದ ಬಾಲಕಿಗೆ ನೀಡಲು ಆದೇಶಿಸಲಾಗಿದೆ. ಸರಕಾರದ ಪರ ಪೋಕ್ಸೋ ವಿಶೇಷ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ  ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!