ಮಂಗಳೂರು: ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾದ ಆರೋಪಿಯ ಬಂಧನ
ಮಂಗಳೂರು: ಡಿ.25ರಂದು ಗುರುನಗರ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಯೆಯ್ಯಾಡಿಯಲ್ಲಿರುವ ತಮ್ಮ ಅಂಗಡಿಯಿಂದ ಮನೆಯ ಕಡೆಗೆ ಶಂಕರಭವನ ಹೊಟೇಲ್ ಬಳಿಯ ಕೊಪ್ಪಳಕಾಡು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಸಂಜೆ ಸುಮಾರು 6.30 ಗಂಟೆಗೆ ಹಿಂದಿನಿಂದ ಬಂದ ಓರ್ವ ಅಪರಿಚಿತ ವ್ಯಕ್ತಿ ಏಕಾಏಕಿ ರತ್ನಾವತಿಯವರ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಬೆಲೆ ಬಾಳುವ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಅದೇ ದಿನ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 128/2025 ಕಲಂ: 304(2) ಭಾರತೀಯ ನ್ಯಾಯ ಸಂಹಿತೆ-2023 ರಂತೆ ಪ್ರಕರಣ ದಾಖಲಾಗಿತ್ತು.

ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಗವಿರಾಜ್ ಮತ್ತು ಅರುಣ್ ಕುಮಾರ್, ಪಿ.ಎಸ್.ಐ ರವರು, ಠಾಣೆಯ ಕ್ರೈಂ ಸಿಬ್ಬಂದಿಗಳು ಮತ್ತು ಎಸಿಪಿ ದಕ್ಷಿಣ ಉಪವಿಭಾಗದ ಕ್ರೈಂ ಸಿಬ್ಬಂದಿಗಳು ಸೇರಿ ಆರೋಪಿಯ ಪತ್ತೆ ಕಾರ್ಯವನ್ನು ನಡೆಸಿದ್ದು, ಸಾಕ್ಷ್ಯಾಧಾರಗಳ ಮೇಲೆ ಡಿ. 28ರಂದು ಪ್ರಕರಣದ ಆರೋಪಿ ಉಳಿಗ್ರಾಮ ಕಕ್ಕೆಪದವು ರೋಹಿತ್ .ಬಿ ದಾಸ್ ಎಂಬಾತನನ್ನು ಬಂಟ್ವಾಳದ ಕುಕ್ಕೆಪದವು ಎಂಬಲ್ಲಿ ಬಂಧಿಸಿ ಸುಲಿಗೆ ಮಾಡಿದ 32 ಗ್ರಾಂ ಚಿನ್ನದ ಕರಿಮಣಿ ಸರ (ಮೌಲ್ಯ ರೂ.3,50,000/-) ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಯು ಸ್ವಿಗ್ಗಿ ಮತ್ತು ಝೋಮೆಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಸ್ಕೂಟರ್ ಖರೀದಿಸಿದ್ದು, ಮತ್ತು ಇತರ ವಿಚಾರಗಳಿಗೆ ಲಕ್ಷಾಂತರ ರೂಪಾಯಿಗಳ ಸಾಲ ಮಾಡಿದ್ದು, ಸಾಲವನ್ನು ತೀರಿಸಲು ಈ ಕೃತ್ಯವನ್ನು ಎಸಗಿರುವುದು ಈವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



