ನೇಮೋತ್ಸವದಲ್ಲಿ ಸರ ಕಳ್ಳತನ: ಮೂವರು ಆರೋಪಿಗಳ ಬಂಧನ
ಹೆಜಮಾಡಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸದಲ್ಲಿ ವೃದ್ಧೆಯ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿ ಹಾಗೂ ಮಾರಿ ಬಂಧಿತ ಆರೋಪಿಗಳು. ಹೆಜಮಾಡಿಯ ಕಮಲಾ (78) ಎಂಬವರು ಡಿ.24ರಂದು ಮನೆಯ ಬಳಿಯ ಶ್ರೀಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸಕ್ಕೆ ಹೋಗಿದ್ದರು. ಈ ವೇಳೆ ಪರಿಚಯದ ಶಾರದಾ ಪೂಜಾರಿ ಎಂಬವರು ಕಮಲಾರ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದೆ ಇರುವ ಬಗ್ಗೆ ತಿಳಿಸಿದರು.
ಡಿ.25ರಂದು ಸಂಜೆ ದೇವಸ್ಥಾನದ ಆಡಳಿತ ಮಂಡಳಿಯವರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮೂವರು ಅಪರಿಚಿತ ಮಹಿಳೆಯರು ಕಮಲಾರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಗಮನಕ್ಕೆ ಬಾರದೆ ಕುತ್ತಿಗೆಯಲ್ಲಿದ್ದ ಸುಮಾರು ಮೂರು ಪವನ್ ಚಿನ್ನದ ಸರವನ್ನು ಕಳವು ಮಾಡಿ ರುವುದು ಕಂಡುಬಂದಿದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರಂತೆ ತನಿಖೆ ನಡೆಸಿದ ಪೊಲೀಸರು, ಮೂವರು ಆರೋಪಿಗಳನ್ನು ಪುತ್ತೂರಿನಲ್ಲಿ ಬಂಧಿಸಿದ್ದಾರೆ. ಇವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.





