ಬಡತನವನ್ನು ಸವಾಲಾಗಿ ಸ್ವೀಕರಿಸಿ ಐಎಎಸ್ ಆಗಿದ್ದ ಮಹಾಂತೇಶ್ ಬೀಳಗಿ
ಬೆಳಗಾವಿ: ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನ.25ರಂದು ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಲಬುರಗಿಯ ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇದೀಗ ಅವರ ಮೃತದೇಹವನ್ನು ಕಲಬುರಗಿಯಿಂದ ಬೆಳಗಾವಿಯ ರಾಮದುರ್ಗಕ್ಕೆ ತಲುಪಿಸಲಾಗಿದ್ದು, ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದ್ದು ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
ಜನಸ್ನೇಹಿ ಹಾಗೂ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಐಎಎಸ್ ಮಹಾಂತೇಶ್ ಬೀಳಗಿ ವಿಜಯಪುರ ಮಾರ್ಗವಾಗಿ ಬರುತ್ತಿದ್ದ ಅವರ ಇನ್ನೋವಾ ಕಾರು, ರಸ್ತೆಯಲ್ಲಿ ಅಡ್ಡ ಬಂದ ಬೀದಿ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡಿದೆ. ನಂತರ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು ನೂರು ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಐವರಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
ಮಹಾಂತೇಶ್ ಅವರು ಕಡು ಬಡತನದಲ್ಲಿ ಬೆಳೆದಿದ್ದರು. ಬಾಲ್ಯದಿಂದಲೂ ಕಷ್ಟಕರ ಜೀವನ ನಡೆಸಿದ್ದ ಅವರ ತಾಯಿ ಮನೆಗೆಲಸ ಮಾಡಿ ಮಹಾಂತೇಶ್ ಶಿಕ್ಷಣವನ್ನು ಮುಂದುವರಿಸಿದರು. ಕೆಎಎಸ್ ಪರೀಕ್ಷೆ ಮತ್ತು ನಂತರ ಐಎಎಸ್ ಪರೀಕ್ಷೆ ಪಾಸ್ ಮಾಡಿ ಉತ್ತಮ ಜೀವನ ಕಟ್ಟುಕೊಂಡಿದ್ದರು. ತಮ್ಮ ಬಾಲ್ಯದಲ್ಲಿ ಹೇಗೆ ಕಷ್ಟಪಟ್ಟಿದ್ದೇನೆ ಎಂಬುವುದನ್ನು ಬೀಳಗಿ ಅವರು ಹಲವು ಸಂದರ್ಶನಗಳಲ್ಲಿ ಹೇಳಿದ್ದರು.
ತಮಗೆ 5 ವರ್ಷವಿದ್ದಾಗ ತಮ್ಮ ತಂದೆಯನ್ನು ಮಹಾಂತೇಶ್ ಬೀಳಗಿ ಕಳೆದುಕೊಂಡರು. ಕಡು ಬಡತನದಲ್ಲಿ ತಾಯಿ ಕೂಲಿ ನಾಲಿ ಮಾಡಿ ಮಗ ಮಹಾಂತೇಶ್ ಬೀಳಗಿಯನ್ನು ಸಾಕಿ ಓದಿಸಿದರು. ತಮಗೆ ವಿಧವಾ ವೇತನ ಬರುತ್ತದೆ ಎನ್ನುವ ಮಾಹಿತಿ ಆಕೆಗೆ ಸಿಕ್ಕಿತ್ತು. ಇದಕ್ಕಾಗಿ ಅಧಿಕಾರಿಯ ಬಳಿಗೆ ತೆರಳಿ, ತಮ್ಮ ಕಡು ಬಡತನದ ಜೀವನದ ಬಗ್ಗೆ ಹೇಳಿಕೊಂಡು ವಿಧವಾ ವೇತನಕ್ಕೆ ಮನವಿ ಮಾಡಿದರು. ಮಾಸಿಕ 25 ರೂಪಾಯಿ ವಿಧವಾ ವೇತನ ಮಾಡಿಕೊಡಲು ಆ ಅಧಿಕಾರಿ ಮಾತ್ರ ರೂ.100 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಷಯ ತಿಳಿದ ಮಹಾಂತೇಶ್ ಬೀಳಗಿ ಅವರು, ಅಂದೇ ತಾನು ಲಂಚ ಪಡೆಯದ ಅಧಿಕಾರಿಯಾಗಬೇಕು ಎಂಬುದಾಗಿ ನಿರ್ಧರಿಸಿದರು.
ಬಡತನದ ನಡುವೆಯೂ ಮಹಾಂತೇಶ್ ಅವರಿಗೆ ಅಧ್ಯಯನದ ಬಗ್ಗೆ ಇದ್ದ ಅಗಾಧ ಆಸಕ್ತಿಯ ಬಗ್ಗೆ ಪಿಯುಸಿ ಮತ್ತು ಡಿಗ್ರಿಯಲ್ಲಿ ಬೀಳಗಿ ಅವರೊಂದಿಗೆ ಓದಿದ್ದ ಸ್ನೇಹಿತರು ವಿವರಿಸಿದ್ದಾರೆ. ಆರಂಭದಲ್ಲಿ ಸಾಧಾರಣ ವಿದ್ಯಾರ್ಥಿಯಾಗಿದ್ದರೂ, 10ನೇ ತರಗತಿಯ ನಂತರ ಓದಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ನಂತರದ ದಿನಗಳಲ್ಲಿ ಪ್ರತಿ ತರಗತಿಯಲ್ಲೂ ಪ್ರಥಮ ರ್ಯಾಂಕ್ ಗಳಿಸಿ ಎಲ್ಲರ ಗಮನ ಸೆಳೆದರು. ಬಸವೇಶ್ವರ ಕಾಲೇಜಿನಲ್ಲಿ ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಅವರು, ಸಿ ಎಸ್ ಬೆಂಬಳಗಿ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದರು. ನಂತರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.
ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. ಕೆಎಎಸ್ ಪಾಸ್ ಮಾಡಿ ನೇರವಾಗಿ ಎಸಿಯಾಗಿ ಆಯ್ಕೆ ಆಗಿದ್ದರು. ಆನಂತರ ಐಎಎಸ್ ಹುದ್ದೆಗೆ ಬಡ್ತಿ ಪಡೆದು ಉನ್ನತಸ್ಥಾನಕ್ಕೇರಿದ್ದರು. ಸ್ಪರ್ಧಾ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದರು. ಅವರ ಈ ಸಾಧನೆ ಯುವಕರಿಗೆ ಪ್ರೇರಣೆಯಾಗಿತ್ತು. ಧಾರವಾಡದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದರು. ಅವರು ದಾವಣಗೆರೆ ಜಿಲ್ಲೆಯ ಉಪ ಆಯುಕ್ತರಾಗಿಯೂ ಸೇರಿದಂತೆ ಹಲವಾರು ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಕೆಲಸ ಮಾಡಿದರು.
ನಂತರ ಅವರು ಈ ವರ್ಷದ ಜನವರಿಯಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಮ್) ನೇತೃತ್ವ ವಹಿಸಿದ್ದರು.



