ಇತಿಹಾಸ ಸೃಷ್ಟಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ
ಮುಂಬೈ: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಭಾರತ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನ.2ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳ ಅಂತರದಲ್ಲಿ ಮಣಿಸಿ ಭರ್ಜರಿ ಜಯ ದಾಖಲಿಸಿತು.

ಭಾರತ ಪರ ಸ್ಮೃತಿ ಮಂಧಾನ 45 ರನ್‌ಗಳಿಸಿ ಔಟಾದರೂ, ಶಫಾಲಿ ವರ್ಮಾ ಮಾತ್ರ ತಮ್ಮ ಆಟ ಮುಂದುವರೆಸಿ 87 ರನ್‌ಗಳ ಇನ್ನಿಂಗ್ಸ್ ಕಟ್ಟಿದರು. ಶಫಾಲಿ ಜೊತೆಗೆ, ದೀಪ್ತಿ ಶರ್ಮಾ ಕೂಡ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ 58 ರನ್ ಬಾರಿಸಿದರು. ವಿಕೆಟ್ ಕೀಪರ್ ರಿಚಾ ಘೋಷ್ 24 ಎಸೆತಗಳಲ್ಲಿ 34 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ತಂಡವು 50 ಓವರ್ಗಳಲ್ಲಿ 298 ರನ್‌ಗಳನ್ನು ಕಲೆಹಾಕಿತು.
ಭಾರತ ನೀಡಿದ್ದ 299 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್ ನಲ್ಲಿ 246 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 52 ರನ್ ಗಳ ಅಂತರದಲ್ಲಿ ಭಾರತದ ಎದುರು ಸೋಲು ಅನುಭವಿಸಿದೆ.
ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ಭರ್ಜರಿ ಆರಂಭ ಪಡೆಯಿತು. ನಾಯಕಿ ಲಾರಾ ವೋಲ್ವಾರ್ಡ್ತ್ ಶತಕ ಸಿಡಿಸಿ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ವಿಕೆಟ್ ಕೈ ಚೆಲ್ಲಿದರು. ಅವರಿಗೆ ಬ್ರಿಟ್ಸ್ (23), ಲೂಸ್ (25), ಡರ್ಕ್ ಸೆನ್ (35) ಸಾಥ್ ನೀಡಿದರು. ಆಲ್‌ರೌಂಡರ್ ಪ್ರದರ್ಶನ ನೀಡಿದ ದೀಪ್ತಿ ಐದು ವಿಕೆಟ್‌ಗಳನ್ನು ಪಡೆದರು. ದಕ್ಷಿಣ ಆಫ್ರಿಕಾ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಲೌರಾ ವೋಲ್ವಾರ್ಡ್ 101 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ.
ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ ಬಹುಮಾನ ಮೊತ್ತವಾಗಿ 4.48 ಅಮೆರಿಕನ್ ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 40 ಕೋಟಿ ರೂ.ಸಿಗಲಿದೆ
ಇನ್ನು ರನ್ನರ್ ಅಪ್ ಆಗಿರುವ ಸೌತ್ ಆಫ್ರಿಕಾ 2.24 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 20 ಕೋಟಿ ರೂ. ಪಡೆಯಲಿದೆ.
ಸೆಮಿಫೈನಲ್ ಆಡಿದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ತಲಾ 1.12 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 10 ಕೋಟಿ ರೂ.) ಪಡೆಯಲಿದ್ದಾರೆ.



