ಅ.20: ‘ಅಶೋಕ ಜನಮನ’ ವಸ್ತ್ರ ವಿತರಣೆ
ಪುತ್ತೂರು: ಅಕ್ಟೋಬರ್ 20 ರಂದು ಪುತ್ತೂರು ಶಾಸಕ
ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ದೀಪಾವಳಿ ಕಾರ್ಯಕ್ರಮ “ ಅಶೋಕ ಜನಮನ” ನಡೆಯಲಿದ್ದು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದರು.

ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಮಾತನಾಡಿದ ಅವರು ಈ ಬಾರಿಯ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದ್ದು ಈ ಬಾರಿ ವಸ್ತ್ರದ ಜೊತೆ ಗಿಫ್ಟ್ ಉಡುಗೊರೆಯಾಗಿ ನೀಡಲಾಗುವುದು ಎಂದು ತಿಳಿಸಿದರು.
ಪುತ್ತೂರಿನ ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದು ಕಾರ್ಯಕ್ರಮಕ್ಕೆ ಅಗಮಿಸುವ ಜನರಿಗೆ ಊಟದ ವ್ಯವಸ್ಥೆ, ಹಾಗೂ ಬೆಳಿಗ್ಗೆ ಮತ್ತು ಸಂಜೆ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕಳೆದ ವರ್ಷ ಸುಮಾರು 85 ಸಾವಿರ ಮಂದಿಗೆ ವಸ್ತ್ರ ವಿತರಣೆ ಮಾಡಲಾಗಿದ್ದು ಈ ಬಾರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿಗೆ ವಸ್ತ್ರದಾನ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಮುಖ್ಯಮಂತ್ರಿಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಸಭಾ ಅಧ್ಯಕ್ಷರ ಸಹಿತ ಅನೇಕ ಸಚಿವರು ಭಾಗವಹಿಸಲಿದ್ದಾರೆ. ರಾಜಕೀಯ ರಹಿತವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಇತರೆ ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗೂಡು ದೀಪ ಸ್ಪರ್ಧೆ, ಅರ್ಹ ಬಡ ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಟ್ರಸ್ಟ್‌ನ ಗೌರವ ಸಲಹೆಗಾರ ಸುಮಾ ಅಶೋಕ್ ರೈ, ಟ್ರಸ್ಟ್ ಪ್ರಮುಖರಾದ ಉಮಾನಾಥ ಶೆಟ್ಟಿ ಪೆರ್ನೆ, ಎಂ ಎಸ್ ಮಹಮ್ಮದ್, ಮಹಮ್ಮದ್ ಬಡಗನ್ನೂರು, ನಿಹಾಲ್ ಪಿ ಶೆಟ್ಟಿ, ನಿರಂಜನ್ ರೈ ಮಟಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ, ಜಯಪ್ರಕಾಶ್ ಬದಿನಾರ್, ಈಶ್ವರಭಟ್ ಪಂಜಿಗುಡ್ಡೆ, ಕೇಶವ ಭಂಡಾರಿ ಕೈಪ, ರಿತೇಶ್ ಶೆಟ್ಟಿ, ರಾಧಾಕೃಷ್ಣ ಬೊಳ್ಳಾಜೆ ಸುಳ್ಯ, ಕೃಷ್ಣಪ್ರಸಾದ್ ಭಟ್ ಬೊಳ್ಳಾವು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಸೆಟ್ಟಿ ಸ್ವಾಗತಿಸಿದರು. ಯೋಗೀಶ್ ಸಾಮಾನಿ ವಂದಿಸಿದರು. ಬಾಲಕೃಷ್ಣ ಕೊಡಿಪ್ಪಾಡಿ, ಶಾಸಕರ ಕಚೇರಿ ಸಿಬಂದಿಗಳಾದ ಲಿಂಗಪ್ಪ, ರಚನಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.