ಪುತ್ತೂರು: ಇನ್‌ಸ್ಟಾಗ್ರಾಮ್ ನಲ್ಲಿ ಸುಳ್ಳು ಮಾಹಿತಿ, ವಿದ್ಯಾರ್ಥಿಗಳಿಗೆ ಬೆದರಿಕೆ ಆರೋಪ, ಪ್ರಕರಣ ದಾಖಲು
ಪುತ್ತೂರು: ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಿರುವ ವ್ಯಕ್ತಿಯೋರ್ವ ಕಾಲೇಜಿನ ಕಾರ್ಯಕ್ರಮಕ್ಕೆ ಸಂಬಂಧಿಸಿ ಆಕ್ಷೇಪ ವ್ಯಕ್ತಪಡಿಸಿ ಸುಳ್ಳು ಸಂದೇಶ ರವಾನಿಸಿ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದಾಗಿ ಆರೋಪಿಸಿ ಕಾಲೇಜಿನ ಉಪನ್ಯಾಸಕರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಜೋನ್ಸನ್ ಡೇವಿಡ್ ಸಿಕ್ಕೇರ ಅವರು ಘಟನೆ ಕುರಿತು ದೂರು ನೀಡಿದ್ದು ಆ.29ರಂದು ನಾನು ಮೊಬೈಲ್‌ನಲ್ಲಿ ಇನ್ನಾ ಗ್ರಾಮ್ ಖಾತೆಯನ್ನು ಪರಿಶೀಲಿಸುತ್ತಿದ್ದ ವೇಳೆ @tm_bad_karma_990 ಎಂಬ ಇನ್‌ಸ್ಟಾ ಗ್ರಾಮ್ ಖಾತೆಯನ್ನು ಬಳಸುತ್ತಿರುವ ವ್ಯಕ್ತಿಯು, ಕಾಲೇಜಿನಲ್ಲಿ ಆ.19ರಂದು ನಡೆದ ನೃತ್ಯ ಕಾರ್ಯಕ್ರಮದಲ್ಲಿ, ಒಂದು ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿನಿಯರು ಭಾಗವಹಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾ, ಧರ್ಮದ ಆಧಾರದಲ್ಲಿ ವಿವಿಧ ಧರ್ಮಗಳ ನಡುವೆ ವೈಮನಸ್ಸು ಉಂಟಾಗುವಂತಹ ಹಾಗೂ ಸುಳ್ಳು ಮಾಹಿತಿ ಹೊಂದಿರುವ ಸಂದೇಶವನ್ನು ಹಾಕಿರುವುದಲ್ಲದೇ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುವುದು ಕಂಡು ಬಂದಿತ್ತು’ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.