ಪವಿತ್ರ ಕುರ್‌ಆನ್ ನ್ನು ಸಂಪೂರ್ಣ ಕೈಬರಹದಲ್ಲಿ ಬರೆದು ಮುಗಿಸಿದ ಗ್ರಾಮೀಣ ಪ್ರತಿಭೆ
ಪುತ್ತೂರು: ಮುಸ್ಲಿಮರ ಪವಿತ್ರ ಗ್ರಂಥ ಕುರ್‌ಆನ್‌ನ 30 ಕಾಂಡಗಳನ್ನು(ಜುಝುಅ) ಕೈ ಬರಹದ ಮೂಲಕ ಬರೆಯುವ ಮೂಲಕ ವಿದ್ಯಾರ್ಥಿನಿಯೋರ್ವಳು ಐತಿಹಾಸ ಸಾಧನೆ ಮಾಡಿದ್ದಾರೆ. ಪುತ್ತೂರು ತಾಲೂಕಿನ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯೋರ್ವರು(ಪ್ರಸ್ತುತ ಹಳೆ ವಿದ್ಯಾರ್ಥಿ) ನಿರಂತರ ಪರಿಶ್ರಮ ನಡೆಸಿ ಪವಿತ್ರ ಕುರ್‌ಆನ್‌ನ 30 ಕಾಂಡಗಳನ್ನು(ಜುಝುಅ) ಬರೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಮರ್ಕಝುಲ್ ಹುದಾ ಮಹಿಳಾ ಕಾಲೇಜ್‌ನ ವಿದ್ಯಾರ್ಥಿನಿ, ಬೈತಡ್ಕದ ಫಾತಿಮಾ ಸಜ್‌ಲ ಈ ಸಾಧನೆ ಮಾಡಿರುವ ವಿದ್ಯಾರ್ಥಿನಿ.

ಕಡಬ ತಾಲೂಕಿನ ಬೈತಡ್ಕ ನಿವಾಸಿ, ಬೈತಡ್ಕ ಜುಮಾ ಮಸೀದಿ ದರ್ಗಾ ಶರೀಫ್ ಇದರ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಮತ್ತು ಝಹ್‌ರಾ ಜಾಸ್ಮಿನ್ ದಂಪತಿಯ ಪುತ್ರಿಯಾಗಿರುವ ಫಾತಿಮಾ ಸಜ್‌ಲ ಅವರು ಕುರ್‌ಆನ್ ಬರವಣಿಗೆ ಕಾಯಕವನ್ನು 2021ರ ಜನವರಿಯಲ್ಲಿ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಅವರು ಇದೇ ಕಾಲೇಜ್‌ನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದರು. ಆ ಸಂದರ್ಭದಲ್ಲಿ 25 ದಿನಗಳ ಬರವಣಿಗೆ ಪೂರ್ತಿಗೊಂಡಾಗ ಕೈ ಸೆಳೆತ ಆರಂಭಗೊಂಡ ಕಾರಣ ಅವರು ಬರವಣಿಗೆಯನ್ನು ನಿಲ್ಲಿಸಿದ್ದರು. ಆದರೂ ಛಲ ಬಿಡದ ಅವರು ಬಳಿಕ 2024ರ ಅಕ್ಟೋಬರ್ ತಿಂಗಳಿನಲ್ಲಿ ಮತ್ತೆ ಕುರ್‌ಆನ್ ಬರವಣಿಗೆ ಪ್ರಾರಂಭಿಸಿದ್ದು 2025 ಆಗಸ್ಟ್‌ನಲ್ಲಿ ಪವಿತ್ರ ಕುರ್‌ಆನಿನ ಪೂರ್ತಿ 30 ಕಾಂಡವನ್ನು(ಜುಝುಅ) ಬರೆದು ಮುಗಿಸಿದ್ದಾರೆ.
30 ಕಾಂಡಗಳನ್ನು(ಜುಝುಅ) ಹೊಂದಿರುವ ಈ ಕುರ್‌ಆನ್ ಆಕರ್ಷಕವಾದ ಕೆಂಪು ಜೊತೆಗೆ ಚಿನ್ನಮಿಶ್ರಿತ ಬಣ್ಣದ ಹೊರಪುಟ ಹೊದಿಕೆಯ ವಿನ್ಯಾಸವನ್ನು ಹೊಂದಿದ್ದು, ಒಟ್ಟು 604 ಪುಟಗಳನ್ನು ಹೊಂದಿದೆ. ಇದನ್ನು ಬರೆದು ಮುಗಿಸಲು ಅವರು ಒಟ್ಟು 302 ದಿನಗಳನ್ನು ಬಳಸಿಕೊಂಡಿದ್ದಾರೆ. ಒಂದು ಪುಟಕ್ಕೆ ಬರೆಯಲು 4 ಗಂಟೆಗಳ ಅವಧಿ ಬೇಕಾಗಿತ್ತು. ಕೆಲವೊಂದು ದಿನಗಳಲ್ಲಿ 8 ಗಂಟೆಗಳನ್ನು ಬಳಸಿಕೊಂಡು 2 ಪುಟಗಳನ್ನು ರಚನೆ ಮಾಡಿದ್ದಾರೆ. ಹೀಗೆ ಒಟ್ಟು 2416 ಗಂಟೆ ಬಳಕೆಯಾಗಿದೆ. ಇದಕ್ಕಾಗಿ ಬಿಳಿ, ತಿಳಿನೀಲಿ, ತಿಳಿ ಹಸಿರು ಬಣ್ಣದ ಕಾಗದವನ್ನು ಬಳಸಿಕೊಳ್ಳಲಾಗಿದೆ. ಕಪ್ಪು ಬಣ್ಣದ ಕಲಂ ಮತ್ತು ಮಸಿಯಿಂದ ಅಕ್ಷರದ ರೂಪ ಕೊಡಲಾಗಿದೆ.
ಪವಿತ್ರ ಧರ್ಮಗ್ರಂಥವಾದ 604 ಪುಟಗಳನ್ನು ಒಳಗೊಂಡ ಕುರ್‌ಆನ್‌ನ್ನು ಮಸಿ ಮತ್ತು ಕಲಂ ಬಳಸಿ ಕೈಬರಹದ ಮೂಲಕ ಬರೆದು ಮುಗಿಸಿದ ಕರ್ನಾಟಕದ ಏಕೈಕ ವಿದ್ಯಾರ್ಥಿನಿಯಾಗಿರುವ ಫಾತಿಮಾ ಸಜ್‌ಲಾರವರ ಈ ಸಾಧನೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಬೇಕಾಗಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಏಕೆಂದರೆ ಕರ್ನಾಟಕದಿಂದ ಫಾತಿಮಾ ಸಜ್‌ಲಾರವರು ಮಾತ್ರ ಈ ರೀತಿ ಕೈಬರಹದ ಮೂಲಕ ಕುರ್‌ಆನನ್ನು ಬರೆದ ವಿದ್ಯಾರ್ಥಿನಿಯಾಗಿದ್ದಾರೆ.
ನಾನು ಆರಂಭದಲ್ಲಿ ಕ್ಯಾಲಿಗ್ರಫಿ ಮಾಡುತ್ತಿದ್ದೆ, ಅದನ್ನು ನೋಡಿದ ನನ್ನ ತಂದೆ ನೀನು ಕುರ್‌ಆನ್‌ನ್ನು ಬರೆದರೆ ಅದಕ್ಕೆ ಮಹತ್ವ ಜಾಸ್ತಿ ಎಂದು ಹೇಳಿದರು. ತಂದೆ ಹೇಳಿದಂತೆ ಕುರ್‌ಆನ್‌ನ್ನು ಕಲಂ ಮಸಿ ಬಳಸಿ ಬರೆಯಲು ಆರಂಭಿಸಿ ಇದೀಗ ಪೂರ್ತಿಗೊಳಿಸಿದ್ದೇನೆ. ತಾಯಿ ಕೂಡಾ ನನಗೆ ಬೆಂಬಲ ನೀಡಿದ್ದಾರೆ. ಕುಂಬ್ರ ಮರ್ಕಝ್ ಸಂಸ್ಥೆಯವರು, ಸಹಪಾಠಿಗಳು ಪ್ರೋತ್ಸಾಹ ನೀಡಿದ್ದಾರೆ. ಭವಿಷ್ಯದಲ್ಲಿ ಸಹೀಹುಲ್ ಬುಖಾರಿ ಎನ್ನುವ ಹದೀಸ್ ಗ್ರಂಥ ಬರೆಯಬೇಕೆನ್ನುವ ಕನಸಿದೆ ಎಂದು ಫಾತಿಮಾ ಸಜ್‌ಲ ತಿಳಿಸಿದ್ದಾರೆ.
ಫಾತಿಮಾ ಸಜ್‌ಲಾ ಅವರು ಕೈಬರಹದ ಮೂಲಕ ಬರೆದ ಕುರ್‌ಆನ್ ಲೋಕಾರ್ಪಣಾ ಕಾರ್ಯಕ್ರಮ ಆ.16ರಂದು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ನಡೆಯಿತು.
ಕೇರಳದ ಮರ್ಕಝ್ ನಾಲೇಜ್ ಸಿಟಿಯ ಯಾಸೀನ್ ಸಖಾಫಿ ಅಲ್ ಅಝ್ಹರಿ ಕುರ್‌ಆನ್ ಪ್ರತಿಯನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು ಪವಿತ್ರ ಕುರ್‌ಆನ್‌ನ್ನು ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ, ಇದೊಂದು ಅಸಾಮಾನ್ಯ ಸಾಧನೆ, ಈ ವಿದ್ಯಾರ್ಥಿನಿ ಮಾಡಿದ ಸಾಧನೆ ಬಹಳ ಗೌರವಪೂರ್ವಕವಾದದ್ದು, ಸಂಸ್ಥೆಗೂ ಇದೊಂದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಕುಂಬ್ರ ಮರ್ಕಝ್‌ನ ಆಡಳಿತ ಸಮಿತಿಯ ಉಪಾಧ್ಯಕ್ಷ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿನಿ ಫಾತಿಮಾ ಸಜ್‌ಲ ಅಭೂತಪೂರ್ವ ಸಾಧನೆಯೊಂದನ್ನು ಮಾಡಿದ್ದು ಮುಸಲ್ಮಾನರ ಪವಿತ್ರ ಗ್ರಂಥವಾಗಿರುವ ಕುರ್‌ಆನ್‌ನ್ನು ಕೈಬರಹದ ಮೂಲಕ ಬರೆದಿರುವ ಅವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಅದನ್ನು ಅನಾವರಣ ಮಾಡುತ್ತಿದ್ದೇವೆ, ಇದೊಂದು ಶ್ರೇಷ್ಠ ಸಾಧನೆಯಾಗಿದೆ ಎಂದು ಹೇಳಿದರು.

ಕುಂಬ್ರ ಮರ್ಕಝ್‌ನ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿನಿಯೊಬ್ಬಳು ಕುರ್‌ಆನ್‌ನ್ನು ಕೈಬರಹದ ಮೂಲಕ ಬರೆದು ಮುಗಿಸಿ ದೊಡ್ಡ ಸಾಧನೆ ಮಾಡಿದ್ದಾರೆ, ಇದು ನಮ್ಮ ಸಂಸ್ಥೆಗೆ ಹೆಮ್ಮೆ ಮತ್ತು ಅಭಿಮಾನ ತಂದಿದೆ ಎಂದರು.
ಈ ಸಂದರ್ಭದಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಬಶೀರ್ ಹಾಜಿ ಇಂದ್ರಾಜೆ, ಕಾರ್ಯದರ್ಶಿ ಅಬ್ದುಲ್ ರಶೀದ್ ಸಂಪ್ಯ, ಶರೀಅತ್ ವಿಭಾಗದ ಪ್ರಾಂಶುಪಾಲ ವಳವೂರು ಮುಹಮ್ಮದ್ ಸಅದಿ, ಉಪಪ್ರಾಂಶುಪಾಲ ಜಲೀಲ್ ಸಖಾಫಿ ಜಾಲ್ಸೂರು, ಪದವಿ ವಿಭಾಗದ ಪ್ರಾಂಶುಪಾಲ ಮಹಮ್ಮದ್ ಮನ್ಸೂರ್ ಕಡಬ, ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ, ಶರೀಅತ್ ವಿಭಾಗ ಮುಖ್ಯಸ್ಥ ಹನೀಫ್ ಸಖಾಫಿ ಕಡಬ, ಫಾತಿಮಾ ಸಜ್‌ಲ ಅವರ ತಂದೆ ಇಸ್ಮಾಯಿಲ್ ಹಾಜಿ ಬೈತಡ್ಕ, ತಾಯಿ ಝಹ್‌ರಾ ಜಾಸ್ಮಿನ್ ಉಪಸ್ಥಿತರಿದ್ದರು.