ಉಡುಪಿ: ನೇಜಾರಿನಲ್ಲಿ ತಾಯಿ, ಮಕ್ಕಳ ಕೊಲೆ ಪ್ರಕರಣ; ಮಾ.7ಕ್ಕೆ ವಿಚಾರಣೆ ಮುಂದೂಡಿಕೆ
ಉಡುಪಿ: ನೇಜಾರಿನಲ್ಲಿ ನಡೆದ ತಾಯಿ, ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವೀಡಿಯೋ ದಾಖಲಿಸಬೇಕೆಂಬ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ ಅರ್ಜಿ ಹಾಗೂ ಆರೋಪಿಯ ಕಾರನ್ನು ವಶಕ್ಕೆ ನೀಡಬೇಕೆಂಬ ಬ್ಯಾಂಕಿನವರ ಅರ್ಜಿಯ ಕುರಿತ ಅಂತಿಮ ಆದೇಶವನ್ನು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ. 7ಕ್ಕೆ ಕಾಯ್ದಿರಿಸಿದೆ ಎಂದು ತಿಳಿದು ಬಂದಿದೆ.

ಫೆ.20ರಂದು ವಿಚಾರಣೆ ಹಿನ್ನೆಲೆಯಲ್ಲಿ ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಸರೆನ್ಸ್ ಮೂಲಕ ಕೋರ್ಟ್ ಗೆ ಹಾಜರುಪಡಿಸಲಾಯಿತು. ಆರೋಪಿ ಚೌಗುಲೆಯು ಕೃತ್ಯಕ್ಕೆ ಬಳಸಿದ ಕಾರನ್ನು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ನೀಡುವಂತೆ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿದರು. ಆರೋಪಿ ಪರ ವಕೀಲರು ಕಾರನ್ನು ಬ್ಯಾಂಕಿನವರ ವಶಕ್ಕೆ ನೀಡಲು ನಮ್ಮ ಆಕ್ಷೇಪವಿಲ್ಲ ಎಂದರು.
ಆದರೆ ವಿಶೇಷ ಸರಕಾರಿ ಅಭಿಯೋಜಕರು, ಕಾರನ್ನು ಬ್ಯಾಂಕಿನವರಿಗೆ ನೀಡಿದರೆ ಮುಂದೆ ಅವರು ಅದನ್ನು ಮಾರಾಟ ಮಾಡಿದರೆ ಸಾಕ್ಷ್ಯ ವಿಚಾರಣೆಗೆ ತೊಂದರೆಯಾಗುತ್ತದೆ ಎಂಬುದಾಗಿ ಆಕ್ಷೇಪಣೆ ವ್ಯಕ್ತಪಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಸಮೀವುಲ್ಲಾ, ಈ ಅರ್ಜಿಯ ಕುರಿತ ಅಂತಿಮ ಆದೇಶವನ್ನು ಮಾ. 7ಕ್ಕೆ ಕಾಯ್ದಿರಿಸಲಾಗಿದೆ ಎಂದು ಆದೇಶಿಸಿದರು.