2014ರಲ್ಲಿ ಕೌಡಿಚ್ಚಾರ್‌ನ ಯೂಸುಫ್ ಹಾಜಿ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದ ಎಸ್ ಎಂ ಕೃಷ್ಣ
ಪುತ್ತೂರು: ಡಿ.10ರಂದು ನಿಧನ ಹೊಂದಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ ಕೃಷ್ಣ ಅವರು 2014ರಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಪುತ್ತೂರಿಗೆ ಆಗಮಿಸಿದ್ದರು.
ಲೋಕಸಭಾ ಚುನಾವಣೆ ಸಂದರ್ಭ ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜನಾರ್ದನ ಪೂಜಾರಿಯವರ ಪರ ಪ್ರಚಾರ ಮಾಡಲು ಕೌಡಿಚ್ಚಾರ್‌ಗೆ ಬಂದಿದ್ದು ಅಲ್ಲಿ ಚುನಾವಣಾ ಪ್ರಚಾರ ಸಭೆ ಮುಗಿದ ಬಳಿಕ ಕೌಡಿಚ್ಚಾರ್‌ನಲ್ಲಿರುವ ಯೂಸುಫ್ ಹಾಜಿ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದರು. ಎಸ್.ಎಂ ಕೃಷ್ಣ ಅವರು 2014ರಲ್ಲಿ ಚುನಾವನಾ ಪ್ರಚಾರಕ್ಕೆಂದು ಬಂದವರು ನಮ್ಮ ಮನೆಯಲ್ಲಿ ಆತಿಥ್ಯ ಸ್ವೀಕರಿಸಿರುವುದು ನಮ್ಮ ಪಾಲಿನ ಅವಿಸ್ಮರಣೀಯ ಕ್ಷಣವಾಗಿದೆ ಎಂದು ದಿ.ಯೂಸುಫ್ ಹಾಜಿ ಕೌಡಿಚ್ಚಾರ್ ಅವರ ಪುತ್ರ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಸ್ಮರಿಸಿಕೊಂಡಿದ್ದಾರೆ. ಐಟಿ ಬಿಟಿ ಕ್ಷೇತ್ರಕ್ಕೆ ಎಸ್.ಎಂ ಕೃಷ್ಣ ಅವರ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ, ಅವರು ಈ ರಾಜ್ಯಕ್ಕೆ ಮತ್ತು ದೇಶಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು, ನಾಡು ಕಂಡ ಶ್ರೇಷ್ಠ ರಾಜಕಾರಣಿಯೊಬ್ಬರು ನಮ್ಮನ್ನಗಲಿದ್ದಾರೆ ಎಂದು ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ತಿಳಿಸಿದ್ದಾರೆ.