ಕರಾವಳಿ

ಸುಳ್ಯ: ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮಕ್ಕಳ ಮಾಸೋತ್ಸವ

ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರ ಹಾಗೂ ದ ಕ ಜಿಲ್ಲಾ ಒಕ್ಕೂಟ (ರಿ.), ಮಕ್ಕಳ ಮಾಸೋತ್ಸವ ಸಮಿತಿ ದ.ಕ.ಜಿಲ್ಲೆ , ಗ್ರೀನ್ ವ್ಯೂ ವಿದ್ಯಾ ಸಂಸ್ಥೆ ಸುಳ್ಯ ಇದರ ನೇತೃತ್ವದಲ್ಲಿ ಲೋಕಾಯುಕ್ತ ಇಲಾಖೆ ಮಂಗಳೂರು, ಶಿಕ್ಷಣ ಇಲಾಖೆ ಸುಳ್ಯ ಮತ್ತು ‘ಪಡಿ’ ಸಂಸ್ಥೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿ 5 ರಂದು
ಮಕ್ಕಳ ಮಾಸೋತ್ಸವ-2024 ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನ.ಪಂ ಸದಸ್ಯ ಕೆ ಎಸ್ ಉಮ್ಮರ್ ನೆರವೇರಿಸಿ ಮಾತನಾಡಿ ಶುಭ ಹಾರೈಸಿದರು. ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ ಜನತಾ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂಗಳೂರು ಲೋಕಾಯುಕ್ತ ಕಚೇರಿಯ ಉಪನಿರೀಕ್ಷಕ ಶ್ರೀಧರ್  ಮಾತನಾಡಿ ‘ಮಕ್ಕಳು ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ತಮ್ಮ ಹಕ್ಕುಗಳನ್ನು ಪಡೆಯುವ ವೇಳೆ ಅವರ ಪೋಷಕರುಗಳು ಕೆಲವು ಸಂಧರ್ಭದಲ್ಲಿ ಭ್ರಷ್ಟಾಚಾರದ ಕುಳಗಳ ಕೈಗೆ ಸಿಲುಕುವ ಸಂದರ್ಭ ಉಂಟಾಗುತ್ತದೆ. ಇದರಿಂದ ಮಕ್ಕಳ ಹಕ್ಕಿಗೆ ಭಂಗ ಉಂಟಾಗುತ್ತದೆ. ಅವರ ಜೀವನ ಮತ್ತು ಜೀವನದ ಗುರಿಯ ದಿಕ್ಕು ಕೆಡುತ್ತದೆ. ಇದಕ್ಕೆ ಮಕ್ಕಳ ರಕ್ಷಣೆಯ ಇಲಾಖೆ, ಸಂಘ,ಸಂಸ್ಥೆಗಳು ಕಾರ್ಯಪ್ರವತ್ತರಾಗಿ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ದ. ಕ ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿ ಸಂಚಾಲಕಿ ಶ್ರೀಮತಿ ಆಶಾಲತಾ ಸುವರ್ಣ, ಸಿ ಡಿ ಪಿ ಓ ಶೈಲಜಾ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಇಲ್ಯಾಸ್ ಅಹ್ಮದ್, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್, ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಮಾತನಾಡಿ ಮಕ್ಕಳ ಹಕ್ಕುಗಳ ಕುರಿತು ಹಾಗೂ ಅವರ ಜವಾಬ್ದಾರಿಗಳು ಮತ್ತು ಪೋಷಕರ ಜಾಗೃತಿ ಕುರಿತು ಅರಿವು ಮೂಡಿಸಿದರು.

ಸುಳ್ಯ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಶಂಕರ್ ಪೆರಾಜೆ ಪ್ರಾಸ್ತವಿಕ ಮಾತನಾಡಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸುಳ್ಯ ಗೃಹರಕ್ಷಕ ದಳದ ಮಹಿಳಾ ಸಿಬ್ಬಂದಿಗಳಾದ ಪುಷ್ಪಾವತಿ, ಗೀತಾ ನಾರಾಜೆ,  ನಳಿನಿ, ಪೂರ್ಣಿಮಾ,ಕು.ಶ್ರುತಿ ಜಿ,ಕು.ರಮ್ಯಾ ಜಿ, ಇವರನ್ನು ಗುರುತಿಸಿ ಗೌರವ ಸನ್ಮಾನ ಮಾಡಲಾಯಿತು.

ಇತ್ತೀಚೆಗೆ ದ. ಕ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರಾಗಿ ಸರಕಾರದಿಂದ ಆಯ್ಕೆಯಾದ ಅಡ್ವಕೆಟ್ ಅಬೂಬಕ್ಕರ್ ಅಡ್ಕಾರ್ ಇವರನ್ನು ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಒಕ್ಕೂಟ ಸಮಿತಿ ಸದಸ್ಯರಾದ ಪ್ರೇಮಿ ಫರ್ನಾಡೀಸ್, ಸುಳ್ಯ ಠಾಣಾ ಉಪನಿರೀಕ್ಷಕರಾದ ಸಂತೋಷ್ ಬಿ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಹಾಗೂ ಜಿಲ್ಲಾ ಮಕ್ಕಳ ಮಾಸೋತ್ಸವ ಸಮಿತಿಯ ಸಹ ಸಂಚಾಲಕ ಹಸೈನಾರ್ ಜಯನಗರ ಸ್ವಾಗತಿಸಿದರು. ಸದಸ್ಯರು ಹಾಗೂ ತರಬೇತುದಾರ ನಾರಾಯಣ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮೋನಪ್ಪ ಕೊಳಗಿ ವಂದಿಸಿದರು. ಸದಸ್ಯರುಗಳಾದ ನಝಿರ್ ಶಾಂತಿನಗರ, ಚಿದಾನಂದ ಕುತ್ಪಾಜೆ, ಅಬ್ದುಲ್ಲ ಅಜ್ಜಾವರ, ಸುಜಾತಾ ಕದಿಕ್ಕಡ್ಕ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!