ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ಗೆ CBSE ಅನುಮೋದನೆ
ವಿಟ್ಲ: ಗ್ರಾಮೀಣ ಭಾಗವಾದ ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಸ್ಕೂಲ್ ಗೆ ಇದೀಗ ಸಿ.ಬಿ.ಎಸ್. ಇ. ಅನುಮೋದನೆ ದೊರೆತಿದೆ. ಇದು ನಮ್ಮ ಗ್ರಾಮೀಣ ಭಾಗದ ಶಾಲೆಗೆ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಪ್ರತಿಯೋರ್ವರ ಸಹಕಾರದಿಂದಾಗಿ ನಮ್ಮ ಕನಸು ಇದೀಗ ನನಸಾಗಿದೆ. ಇದಕ್ಕೆ ಕಾರಣ ಕರ್ತರಾದ ತಮಗೆಲ್ಲರಿಗೂ ನಾವೂ ಆಭಾರಿಯಾಗಿದ್ದೇವೆ. ತಮ್ಮ ಮಕ್ಕಳ ಭವ್ಯ ಭವಿಷ್ಯದ ದೃಷ್ಟಿಯಿಂದ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ
ಬೇಕಾದ ಎಲ್ಲಾ ವ್ಯವಸ್ಥೆಯನ್ನು ನಾವು ಮಾಡುತ್ತಿದ್ದು, ಪೋಷಕರು ನಮ್ಮೊಂದಿಗೆ ಕೈಜೋಡಿಸಬೇಕು
ಎಂದು ಜನಪ್ರಿಯ ಫೌಂಡೇಶನ್ ನ ಅಧ್ಯಕ್ಷರಾದ ಡಾ. ಅಬ್ದುಲ್ ಬಶೀರ್ ವಿ.ಕೆ ಹೇಳಿದರು.
ಅವರು ಕಂಬಳಬೆಟ್ಟು ಜನಪ್ರೀಯ ಸೆಂಟ್ರಲ್ ಸ್ಕೂಲ್ ಗೆ ಸಿಬಿಎಸ್ ಇ ಅನುಮೋದನೆ ಲಭಿಸಿರುವ ವಿಚಾರದ ಕುರಿತಾಗಿ ಮಾಹಿತಿ ನೀಡುವ ನಿಟ್ಟಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಬಿಎಸ್ ಇ ನಮ್ಮ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯಾಗಿದೆ. ಈ ಪಠ್ಯಕ್ರಮದಲ್ಲಿ ಓದಿದ ವಿದ್ಯಾರ್ಥಿಗಳು ನೀಟ್ ಸಹಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತಮ ಸ್ಥಾನದೊಂದಿಗೆ ತೇರ್ಗಡೆ ಹೊಂದಲು ಸಹಕಾರಿಯಾಗಿದೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸಿಬಿಎಸ್ ಇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಾಗಿದ್ದಾರೆ ಎನ್ನುವುದು ವಿಶೇಷ. ಈಗಾಗಲೇ ಸಿಬಿಎಸ್ ಇ ಶಾಲೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಮ್ಮ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ಹಿನ್ನೆಲೆಯಲ್ಲಿ ನಮಗೆ ಅನುಮೋದನೆ ಸಿಕ್ಕಿದೆ. ದೊಡ್ಡ ದೊಡ್ಡ ಪೇಟೆ ಪಟ್ಟಣಗಳಲ್ಲಿ ಇರುವ ಶಾಲೆಗಳಲ್ಲಿರುವ ವ್ಯವಸ್ಥೆಯನ್ನು ಈ ಗ್ರಾಮೀಣ ಭಾಗದಲ್ಲಿ ಮಾಡಲಾಗಿದೆ. ನನ್ನ ಹುಟ್ಟೂರಾದ ಕಂಬಳಬೆಟ್ಟು ವಿನಂತಹ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಲಭಿಸಬೇಕು, ಅವರೂ ಸಮಾಜದಲ್ಲಿ ಮುನ್ನೆಲೆಗೆ ತರಬೇಕು ಎನ್ನುವುದು ನಮ್ಮ ಮಹದಾಸೆಯಾಗಿದೆ. ಅದಕ್ಕೆ ತಕ್ಕುದಾದ ವ್ಯವಸ್ಥೆಯನ್ನು ಮಾಡಲಾಗಿದೆ. ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅದಕ್ಕೆ ಬೇಕಾದ ಶಿಕ್ಷಕರನ್ನು ವ್ಯವಸ್ಥೆ ಮಾಡಲಾಗಿದೆ. ನಮ್ಮಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿಯೋರ್ವ ವಿದ್ಯಾರ್ಥಿಯ ಆಸಕ್ತಿಯನ್ನು ಗುರುತಿಸಿ ಆತನಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಲಾ ಕ್ಯಾಂಪಸ್ ಅನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸುವ ಜೊತೆಗೆ 2000 ಮಕ್ಕಳಿಗೆ ಕುಳಿತುಕೊಳ್ಳುವ ಆಡಿಟೋರಿಯಂ ಹಾಗೂ ಉತ್ತಮ ಕ್ರೀಡಾಂಗಣ ನಿರ್ಮಾಣದ ಯೋಜನೆಯಿದೆ ಎಂದರು.
ಯುನೈಟೆಡ್ ನೇಷನ್ಸ್‌ನ ರಾಷ್ಟ್ರೀಯ ಕಾರ್ಯದರ್ಶಿ, ಶಾಲಾ ಸಲಹೆಗಾರರಾದ ಡಾ. ರವಿ ಕುಮಾರ್ ಎಲ್.ಪಿ.ರವರು ಮಾತನಾಡಿ ಸಿಬಿಎಸ್ ಇ ಸೆಂಟ್ರಲ್ ಬೋರ್ಡ್ ಆಫ್ ಎಜ್ಯುಕೇಶನ್. ಈ ಪಠ್ಯಕ್ರಮ ಅತೀ ಹೆಚ್ಚು ಭಾರತ ದೇಶದ ಶಾಲೆಗಳು ಉಪಯೋಗಿಸುತ್ತಿವೆ. ಇದಕ್ಕೆ ಕಾರಣ ಕೇಂದ್ರ ಸರಕಾರದ ಅಡಿಯಲ್ಲಿ ಇದರ ಪಠ್ಯ ಕ್ರಮಗಳು ಬರುತ್ತದೆ. ಹೆಚ್ಚಿನ ಶಾಲೆಗಳು ಇದೇ ಪಠ್ಯ ಕ್ರಮಗಳನ್ನು ಬಳಸಿಕೊಳ್ಳುತ್ತದೆ. ಯಾಕೆಂದರೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ನಡೆಯುತ್ತಿರುವ ಪಠ್ಯ ಕ್ರಮವೇ ಸಿಬಿಎಸ್ ಇ.
ಸಿಬಿಎಸ್ ಇ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ತರದ್ದಾಗಿದೆ. ಶಿಕ್ಷಕರಿಗೆ ಬೇಕಾದ ಶಿಕ್ಷಣದ ಜೊತೆಗೆ ಅವರು 50 ಗಂಟೆಗಳ ತರಬೇತಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಈ ಹಿಂದೆ ಪಠ್ಯ & ಪಠ್ಯೇತರ ಚಟುವಟಿಕೆಗಳು ಬೇರಬೇರೆಯಾಗಿ ನಡೆಯುತ್ತಿತ್ತು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ಬಂದ ಮೇಲೆ ಒಂದಕ್ಕೊಂದು ಜೊತೆಯಾಗಿ ಸಾಗುತ್ತಾ ಹೋಗುತ್ತದೆ. ಇದು ಮಕ್ಕಳ ಉನ್ನತಿಗೆ ಸಹಕಾರಿಯಾಗುತ್ತದೆ. ಪಠ್ಯಕ್ರಮದ ಮೂಲ ಉದ್ದೇಶ ಮಕ್ಕಳಲ್ಲಿ ಜೀವನ ಕೌಶಲ್ಯ ಬೆಳೆಸುವುದು ಆಗಿದೆ. ಸುಮಾರು 25ಕ್ಕೂ ಹೆಚ್ಚಿನ ದೇಶಗಳಲ್ಲಿ ಸಿಬಿಎಸ್ ಇ ಶಿಕ್ಷಣ ಪದ್ದತಿ ಈಗಾಗಲೇ ಜಾರಿಯಲ್ಲಿದೆ. ಇದೊಂದು ಈ ಭಾಗದ ಜನರಿಗೆ ಜನಪ್ರಿಯ ಶಿಕ್ಷಣ ಸಂಸ್ಥೆಯ ಕೊಡುಗೆಯಾಗಿದೆ. ಇದನ್ನು ಮಕ್ಕಳ ಪೋಷಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜನಪ್ರಿಯ ಸೆಂಟ್ರಲ್ ಸ್ಕೂಲ್ ಅಧ್ಯಕ್ಷರಾದ ಫಾತಿಮ ನಸ್ರೀನ್ ಬಶೀರ್, ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ನಿರ್ದೇಶಕರಾದ ನೌಶೀನ್ ಬದ್ರಿಯಾ, ಶಾಲಾ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್, ಶಾಲಾ ಆಡಳಿತಾಧಿಕಾರಿ ಸಫ್ಘಾನ್ ಪಿಲಿಕಲ್ ಉಪಸ್ಥಿತರಿದ್ದರು.