ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಹತ್ಯೆ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ
ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿಯವರನ್ನು ಹತ್ಯೆಗೈದ ಹರಿಪ್ರಸಾದ್ ಮತ್ತು ಜಯನ್‌ರವರಿಗೆ ಜೀವಾವಧಿ ಸಜೆಯನ್ನು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಅಕ್ಟೋಬರ್ 19ರಂದು ಘೋಷಿಸಿದೆ.
ಬಾಲಚಂದ್ರ ಕಳಗಿಯವರನ್ನು 2019 ಮಾ.19 ರಂದು ಓಮ್ನಿ ಕಾರಿಗೆ ಲಾರಿಯಲ್ಲಿ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಾದ ಸಂಪತ್, ಹರಿಪ್ರಸಾದ್ ಮತ್ತು ಜಯನ್ ಎಂಬವರನ್ನು ಮಡಿಕೇರಿ ಪೋಲೀಸರು ಬಂಧಿಸಿದ್ದರು. ಜಾಮೀನಿನಲ್ಲಿ ಜೈಲಿನಿಂದ ಹೊರ ಬಂದಿದ್ದ ಆರೋಪಿಗಳಲ್ಲಿ ಸಂಪತ್ ಎಂಬಾತನನ್ನು ಸುಳ್ಯದ ಶಾಂತಿನಗರದಲ್ಲಿ ಹತ್ಯೆಗೈಯಲಾಗಿತ್ತು.
ಇದೀಗ ವಿಚಾರಣೆ ಮುಗಿದು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದ್ದು ಇಬ್ಬರು ಆರೋಪಿಗಳಾದ ಹರಿಪ್ರಸಾದ್ ಮತ್ತು ಜಯನ್‌ರವರಿಗೆ ಜೀವಾವಧಿ ಕಠಿಣ ಕಾರಾಗೃಹ ವಾಸ ಹಾಗೂ ತಲಾ 10 ಸಾವಿರ ದಂಡವನ್ನು ವಿಧಿಸಲಾಗಿದೆ.