ಗೃಹಲಕ್ಷ್ಮೀ ಹಣದಿಂದ ಹೋಳಿಗೆ ಊಟ ಹಾಕಿಸಿದ್ದ ಅಕ್ಕಾತಾಯಿಯನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ
ಗೃಹಲಕ್ಷ್ಮೀ ಹಣದಿಂದ ಊರಿನ ಜನರಿಗೆ ಹೋಳಿಗೆ ಊಟ ಹಾಕಿಸಿದ್ದ ಅಕ್ಕಾತಾಯಿ ಲಂಗೋಟಿಯನ್ನು ಸಿಎಂ ಸಿದ್ದರಾಮಯ್ಯ ಬೆಳಗಾವಿ ಏರ್ಪೋರ್ಟ್ನಲ್ಲಿ ಭೇಟಿ ಮಾಡಿದ್ದಾರೆ. ಅಕ್ಕಾತಾಯಿಯನ್ನು ಸಿಎಂಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಚಯಿಸಿದರು. ಈ ವೇಳೆ ಸಿಎಂಗೆ ಕಂಬಳಿ ಹೊದಿಸಿ, ಹಾರ ಹಾಕಿ ಹೋಳಿಗೆ ತಿನ್ನಿಸಿದ್ದಾರೆ.
ಊರಿನ ಮಂದಿಗೆ ಊಟ ಹಾಕಿಸಿದ ವಿಚಾರ ತಿಳಿದ ಸಿಎಂ ಸಿದ್ದರಾಮಯ್ಯ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ನಿಲ್ಲಿಸಬೇಡಿ ಎಂದು ಅಕ್ಕಾತಾಯಿ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲವೆಂದು ಸಿಎಂ ಭರವಸೆ ನೀಡಿದ್ದಾರೆ.
ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ವೃದ್ಧೆಯಾದ ಅಕ್ಕಾತಾಯಿ ಲಂಗೋಟಿ ಅವರು ತನ್ನ ಹತ್ತು ಕಂತಿನ ಗೃಹಲಕ್ಷ್ಮಿ ಹಣವನ್ನ ಕೂಡಿಟ್ಟು ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ಮಾಡಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನಾಡಿಗೆ ಅನ್ನ ಕೊಡೋ ದೊರೆ ನೀನು. ನಿಮ್ಮ ಕೈ ಇನ್ನೂ ಮೇಲಾಗ್ಲಿ ನಾಡ ಆಳುವ ದೊರೆ ನೀನು ದೇಶ ಆಳ್ಬೇಕು. ಹಿಂಗಾ ಆಳ್ಕೊತಾ ಹೋಗ್ತಾ ಇರ್ಬೇಕು. ನಾಡಿಗೆ ಒಳ್ಳೇದಾಗೈತ್ರಿ ಎಂದು ಅಕ್ಕಾತಾಯಿ ಅರಸಿದರು. ಇದೇ ವೇಳೆ ಅಕ್ಕಾತಾಯಿ ಜೊತೆ ಬಂದಿದ್ದ ಇತರೆ ತಾಯಂದಿರು ಒಟ್ಟಾಗಿ ಮುಖ್ಯಮಂತ್ರಿಗಳಿಗೆ, ನಾವು ಲಕ್ಷ್ಮೀದೇವಿಗೆ ಪೂಜೆ ಮಾಡೀವಿ. ಕಂಟಕ ನಾಶ ಆಗ್ಲಿ ಅಂತ ದೇವಿಗೆ ಕೈಮುಗಿದೀವಿ ಎಂದು ಹಾರೈಸಿದರು. ಅಕ್ಕಾತಾಯಿ ಮತ್ತು ಗ್ರಾಮದ ತಾಯಂದಿರು ಆಶೀರ್ವಾದ ಸ್ವೀಕರಿಸಿದ ಮುಖ್ಯಮಂತ್ರಿಗಳು ನಿಮ್ಮ ಆಶೀರ್ವಾದ ಹೀಗೇ ಇರಲಿ. ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲಲ್ಲ. ಹೀಗೇ ಪ್ರತೀ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.