ಮಧುರಾ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿ ಚುನಾವಣೆ: ಮಂತ್ರಿ ಮಂಡಲ ರಚನೆ
ಪುತ್ತೂರು: ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಚುನಾವಣೆ ನಡೆಯಿತು. ಮತದಾನ ಪ್ರಕ್ರಿಯೆ ವಿಧಾನ ಸಭೆ ಚುನಾವಣಾ ರೀತಿಯಲ್ಲಿ ನಡೆದು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸಲಾಯಿತು. ನಾಮ ಪತ್ರ ಸಲ್ಲಿಸುವಿಕೆ, ಹಿಂತೆಗೆಯಲು ದಿನ ನಿಗದಿ, ಅಭ್ಯರ್ಥಿಗಳಿಗೆ ಚಿಹ್ನೆ, ಮತ ಪ್ರಚಾರ, ಮತ ಯಂತ್ರದ ಮೂಲಕ ಮತ ಚಲಾವಣೆ ಇವೆಲ್ಲವೂ ವ್ಯವಸ್ಥಿತವಾಗಿ ನಡೆಯಿತು.
ಮುಖ್ಯ ಚುನಾವಣಾಧಿಕಾರಿಯಾಗಿ ಅಡ್ಮಿನ್ ಆಫೀಸರ್ ಅಬ್ದುಲ್ ನಾಸಿರ್, ಮತದಾನ ಕೇಂದ್ರಾಧಿಕಾರಿಗಳಾಗಿ ವಿವಿಧ ಶಿಕ್ಷಕರು-ಶಿಕ್ಷಕಿಯರು, ಪೋಲಿಸ್ ಮತ್ತು ಸೈನಿಕರಾಗಿ ಹಿರಿಯ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುವ ಮೂಲಕ ನೈಜ ಚುನಾವಣೆಯ ಚಿತ್ರಣವನ್ನು ಕಣ್ಣ ಮುಂದಿರಿಸಲಾಯಿತು. ಬೇರೆ ಬೇರೆ ತರಗತಿ ಕೊಠಡಿಗಳನ್ನು ಬೇರೆ ಬೇರೆ ಮತ ಕ್ಷೇತ್ರಗಳಾಗಿ ವಿಂಗಡಿಸಿ ಪ್ರತಿ ಕ್ಷೇತ್ರ ಗಳಿಗೂ ಅಝಾದ್ ನಗರ, ಗಾಂಧಿ ನಗರ, ಆಂಬೇಡ್ಕರ್ ನಗರ ಎಂದು ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ನೀಡಲಾಗಿತ್ತು.
ಮತ ಎಣಿಕೆಯ ನಂತರ ಮುಖ್ಯಮಂತ್ರಿಯಾಗಿ ಅಫ್ರೀದ್, ಉಪ ಮುಖ್ಯಮಂತ್ರಿಯಾಗಿ ಮುಭಾರಿಸ್ ಆಯ್ಕೆಯಾದರು. ಆ ಬಳಿಕ ಮಂತ್ರಿ ಮಂಡಲ ರಚಿಸಿ ವಿವಿಧ ಖಾತೆಗಳನ್ನು ಹಂಚಿ ನೂತನ ನಾಯಕ ಹಾಗೂ ಮಂತ್ರಿಗಳಿಗೆ ಮುಖ್ಯ ಗುರುಗಳು ಪ್ರಮಾಣ ವಚನ ಬೋಧನೆ ಮಾಡಿದರು.