ಮಾವಿನ ಮಿಡಿ ಕೊಯ್ಯುವ ಏಲಂ ರದ್ದು: ಶಾಸಕರ ಸೂಚನೆ ಮೇರೆಗೆ ರದ್ದುಗೊಳಿಸಿದ ಇಲಾಖೆ
ಪುತ್ತೂರು: ಪುತ್ತೂರು ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರಿ ಜಾಗದಲ್ಲಿ ಮತ್ತು ರಸ್ತೆ ಬದಿಗಳಲ್ಲಿರುವ ಮಾವಿನ ಮರಗಳಿಂದ ಮಾವಿನ ಮಿಡಿ ಕೊಯ್ಯುವ ಏಲಂ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. ಪ್ರತೀ ಬಾರಿ ಬೇಸಗೆಯಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಅಧೀನದಲ್ಲಿ ಏಲಂ ಪ್ರಕ್ರಿಯೆ ನಡೆಯುತ್ತಿದ್ದು ಕಾಟು ಮಾವಿನ ಕಾಯಿಯ ಕೊರತೆಯ ಹಿನ್ನೆಲೆಯಲ್ಲಿ ಮಾವಿನ ಮಿಡಿಯನ್ನು ಉಳಿಸುವ ನಿಟ್ಟಿನಲ್ಲಿ ಏಲಂ ರದ್ದುಗೊಳಿಸಲಾಗಿದೆ.
ಕಳೆದ ವಾರಗಳ ಹಿಂದೆ ಮಾವಿನ ಮಿಡಿ ಕೊಯ್ಯದಂತೆ ತಡೆ ನೀಡಬೇಕು ಎಂದು ಸಂಬಂಧಿಸಿದ ಇಲಾಖೆಗೆ ಮತ್ತು ಅಧಿಕಾರಿಗಳಿಗೆ ಶಾಸಕರು ಸೂಚನೆಯನ್ನು ನೀಡಿದ್ದರು. ಈಗಾಗಲೇ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯಲ್ಲಿರುವ ಬಹುತೇಕ ಮಾವಿನ ಮರಗಳನ್ನು ನಾಶ ಮಾಡಲಾಗಿದೆ. ಕಾಟು ಮಾವು ನೋಡುವುದೇ ಅಪರೂಪ ಎಂಬಂತಾಗಿದ್ದು ಯಾವುದೇ ಕಾರಣಕ್ಕೂ ಮಿಡಿ ಮಾವನ್ನು ಕೊಯ್ಯದಂತೆ ತಡೆ ನೀಡಿ ಎಂದು ಶಾಸಕರು ಸೂಚನೆಯನ್ನುಯ ನೀಡಿದ್ದರು. ಅದರೆ ಏಲಂ ರದ್ದುಮಾಡಿರಲಿಲ್ಲ. ಎ. ೧ ರಂದು ಏಲಂ ಪ್ರಕ್ರಿಯೆಯನ್ನು ರದ್ದುಮಾಡಲಾಗಿದೆ.
ಪೊಲೀಸರ ದಾಳಿ: ಇಲ್ಲಿನ ಕೊಟೆಚಾ ಹಾಲ್ ಬಳಿ ಮಧ್ಯಾಹ್ನ ಮಾವಿನ ಮಿಡಿ ಕೊಯ್ಯುವ ಬಗ್ಗೆ ಸ್ಥಳೀಯರಿಂದ ಶಾಸಕರಿಗೆ ಮೊಬೈಲ್ ಕರೆ ಬಂದಿದ್ದು ತಕ್ಷಣ ನುಗರಸಭಾ ಆಯುಕ್ತರಿಗೆ ಕರೆ ಮಾಡಿ ಕೊಯ್ಯುವುದನ್ನು ನಿಲ್ಲಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಆ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಮಾವಿನ ಮಿಡಿ ಕೊಯ್ಯುವುದಕ್ಕೆ ಬ್ರೇಕ್ ಹಾಕಿದ್ದಾರೆ.
ಪೊಲೀಸರಿಗೆ ಕರೆ ಮಾಡಿ: ರಸ್ತೆ ಬದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿರುವ ಕಾಟು ಮಾವಿನ ಮರದಿಂದ ಯಾರಾದರೂ ಮಿಡಿ ಕೊಯ್ಯುವುದನ್ನು ಕಂಡಲ್ಲಿ ನಗರಸಭಾ ವ್ಯಾಪ್ತಿಯವರು ನಗರಸಭಾ ಆಯುಕ್ತರಿಗೆ ತಿಳಿಸಬೇಕು ಮತ್ತು ಗ್ರಾಮಾಂತರ ಭಾಗದಲ್ಲಿ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಬೇಕು ನಿಮ್ಮ ಕರೆಗೆ ತಕ್ಷಣ ಸ್ಪಂದಿಸುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ.
ಹಣ್ಣಾಗಲಿ ತಿನ್ನುವ: ಕಾಟು ಮಾವು ಬೆಳೆದು ಹಣ್ಣಾಗಲಿ ನಾವು ತಿನ್ನುವ ಜೊತೆಗೆ ಒಂದಷ್ಟು ಹಕ್ಕಿಗಳಿಗೂ ಆಹಾರವಾಗುತ್ತದೆ. ಎಲ್ಲವನ್ನೂ ನಾವೇ ತಿಂದು ಮುಗಿಸಿದರೆ ಪಾಪ ಪ್ರಾಣಿ, ಪಕ್ಷಿಗಳು ಎಲ್ಲಿಗೆ ಹೋಗುವುದು? ರಸ್ತೆ ಬದಿಯಲ್ಲಿರುವ ಕಾಟು ಮಾವು ಹಾಗೇ ಇರಲಿ. ಹಣ್ಣಾದ ಬಳಿಕ ಎಲ್ಲರೂ ಒಟ್ಟಾಗಿ ತಿನ್ನುವ . ಈ ವಿಚಾರದಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡುತ್ತಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.