ಮಂಗಳೂರು: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಮೃತದೇಹ ಪತ್ತೆ
ಮಂಗಳೂರು: ಫೆ.27ರಿಂದ ನಾಪತ್ತೆಯಾಗಿದ್ದ ಸುರತ್ಕಲ್‌ನ ಖಾಸಗಿ ಶಾಲೆಯ ನಾಲ್ವರು ವಿದ್ಯಾರ್ಥಿಗಳ ಮೃತದೇಹ ಹಳೆಯಂಗಡಿಯ ಕೊಪ್ಪಳ ಅಣೆಕಟ್ಟಿನ ರೈಲ್ವೆ ಸೇತುವೆ ಕೆಳಭಾಗದ ನದಿಯಲ್ಲಿ ಪತ್ತೆಯಾಗಿದೆ.
ಮೃತ ಮಕ್ಕಳನ್ನು ಯಶ್ಚಿತ್, ರಾಘವೇಂದ್ರ, ನಿರೂಪ, ಮತ್ತು ಅನ್ವಿತ್ ಎಂದು ಗುರುತಿಸಲಾಗಿದೆ.
10ನೇ ತರಗತಿಯಲ್ಲಿ ಓದುತ್ತಿದ್ದ ಇವರು ಎಸ್.ಎಸ್.ಎಲ್ ಸಿ ಇಂಗ್ಲಿಷ್ ಪೂರ್ವಸಿದ್ಧತಾ ಪರೀಕ್ಷೆ ಬರೆದ ಬಳಿಕ ನಾಪತ್ತೆಯಾಗಿದ್ದರು.
ಕಾರ್ಯಾಚರಣೆಗೆ ಇಳಿದಿದ್ದ ಸುರತ್ಕಲ್ ಠಾಣಾ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹುಡುಕಾಟ ನಡೆಸಿದ್ದರು. ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದಿರುವುದನ್ನು ಪತ್ತೆಹಚ್ಚಿದ್ದರು. ಜೊತೆಗೆ ವಿದ್ಯಾರ್ಥಿಯೋರ್ವನ ಬಳಿ ಇತ್ತೆನ್ನಲಾದ ಮೊಬೈಲ್ ಟವರ್ ಲೋಕೇಶನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನದಿಯ ದಡದಲ್ಲಿ ಮಕ್ಕಳ ಶಾಲೆಯ ಚೀಲಗಳು, ಚಪ್ಪಲಿ, ಸಮವಸ್ತ್ರಗಳು ಪತ್ತೆಯಾಗಿವೆ ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ ಲಾಕ್ ಆಸ್ಪತ್ರೆ ಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.