ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್: ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಸರ್ಫರಾಝ್ ಖಾನ್
ಭಾರತ-ಇಂಗ್ಲಂಡ್ ನಡುವೆ ಮೂರನೇ ಟೆಸ್ಟ್ ರಾಜ್’ಕೋಟ್ ಮೈದಾನದಲ್ಲಿ ಇಂದು ಆರಂಭಗೊಂಡಿದ್ದು ಮೂರನೇ ಟೆಸ್ಟ್ ಪಂದ್ಯದ ಮೂಲಕ ಸರ್ಫರಾಝ್ ಖಾನ್ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ಪಂದ್ಯ ಆರಂಭದ ಮೊದಲು ಅನಿಲ್ ಕುಂಬ್ಳೆ ಅವರು ಸರ್ಫರಾಝ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು.
ಮಗನಿಗೆ ಕುಂಬ್ಳೆ ಟೆಸ್ಟ್ ಕ್ಯಾಪ್ ನೀಡುತ್ತಿದ್ದಂತೆ ಸರ್ಫರಾಜ್ ತಂದೆ ಭಾವುಕರಾಗಿ ಬಿಕ್ಕಳಿಸಿ ಅಳುತ್ತಿದ್ದರು. ಅಲ್ಲದೆ ಮಗನ ಬಹುದೊಡ್ಡ ಕನಸು ಈಡೇರಿದ ಸಂತಸದಲ್ಲಿ ನೌಶಾದ್ ಖಾನ್ ಅಳುತ್ತಾ ಟೆಸ್ಟ್ ಕ್ಯಾಪ್ಗೆ ಮುತ್ತಿಟ್ಟರು. ಇನ್ನೊಂದೆಡೆ ಸರ್ಫರಾಜ್ ಅವರ ಪತ್ನಿ ಆನಂದಭಾಷ್ಪ ಹಾಕುತ್ತಿದ್ದ ದೃಶ್ಯ ಕಂಡು ಬಂತು. ಪತ್ನಿಯನ್ನು ಸರ್ಫರಾಝ್ ಸಂತೈಸಿದರು. ಆ ಭಾವುಕ ಕ್ಷಣಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಳೆದ ಮೂರು ವರ್ಷಗಳಿಂದ ದೇಶೀಯ ಪಂದ್ಯಾವಳಿಗಳಲ್ಲಿ ಸರ್ಫರಾಝ್ ಖಾನ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರೂ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಶ್ರೇಯಸ್ ಅಯ್ಯರ್ ವಿಫಲರಾದ ಕಾರಣ ತಂಡದಿಂದ ಹೊರಬಿದ್ದಿದ್ದು ಮೂರನೇ ಟೆಸ್ಟ್ ಪಂದ್ಯಕ್ಕೆ ಕೆಎಲ್ ರಾಹುಲ್ ಕೂಡ ಅಲಭ್ಯರಾಗಿದ್ದಾರೆ. ಇದರೊಂದಿಗೆ ಸರ್ಫರಾಝ್ ಖಾನ್ ಗೆ ಭಾರತದ ಪರ ಚೊಚ್ಚಲ ಪಂದ್ಯವಾಡುವ ಅವಕಾಶ ದೊರಕಿದೆ.