ಬಾವಿಗೆ ಬಿದ್ದು ಬಾಲಕ ಮೃತ್ಯು
ಬೆಳ್ತಂಗಡಿ: ಏಳು ವರ್ಷದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜ. 15ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಎಂಬಲ್ಲಿ ನಡೆದಿದೆ. ಮಕ್ಕಳ ಜತೆ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಮಹಮ್ಮದ್ ಅನಾನ್ (7.ವ) ಮೃತಪಟ್ಟ ಬಾಲಕ. ಸೋಮವಾರ ಶಾಲೆಗೆ ರಜೆ ಇದ್ದ ಕಾರಣ ಪಕ್ಕದ ಮನೆಯ ಮಕ್ಕಳ ಜತೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಕಟ್ಟೆ ಇಲ್ಲದ ಬಾವಿಯ ಬಳಿ ಮಕ್ಕಳು ಆಟವಾಡುತ್ತಿದ್ದಾಗ ಬಾಲಕ ಅನಾನ್ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದನೆನ್ನಲಾಗಿದೆ.
ಕೂಡಲೇ ಸ್ಥಳೀಯರು ಬಾಲಕನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡಾ ಆದಾಗಲೇ ಬಾಲಕ ಕೊನೆಯುಸಿರೆಳೆದಿದ್ದ. ಪುಂಜಾಲಕಟ್ಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.