ಸುಳ್ಯ : ಬುರ್ಖಾ ಧರಿಸಿಕೊಂಡು ಸರ್ಪ್ರೈಸ್ ನೀಡಲು ಹೋಗಿ ಗೊಂದಲಕ್ಕೆ ಕಾರಣವಾದ ಯುವಕರು..!
ಸುಳ್ಯ: ಸರ್ಪ್ರೈಸ್ ನೀಡಲು ಹೋಗಿ ಯುವಕರಿಬ್ಬರು ಪೇಚಿಗೆ ಸಿಲುಕಿದ ಘಟನೆ ತಾಲೂಕಿನ ದುಗ್ಗಲಡ್ಕ ಕ್ಲಿನಿಕ್ ವೊಂದರಲ್ಲಿ ನಡೆದ ಬಗ್ಗೆ ವರದಿಯಾಗಿದೆ. ತಮ್ಮ ಸಹೋದರಿಯಾಗಿರುವ ವೈದ್ಯರಿಗೆ ಸರ್ಪ್ರೈಸ್ ನೀಡಲೆಂದು ಇಬ್ಬರು ಯುವಕರು ಬುರ್ಕಾ ಹಾಕಿಕೊಂಡು ಕ್ಲಿನಿಕ್ ಗೆ ಎಂಟ್ರಿ ಕೊಟ್ಟಿದ್ದು ಗೊಂದಲಕ್ಕೆ ಕಾರಣವಾಗಿದೆ.
ದುಗ್ಗಲಡ್ಕ ಪೇಟೆಯಿಂದ ಅಲ್ಪ ಮುಂದೆ ನಿಲ್ಲಿಸಿದ ಕಾರಿನಿಂದ ಇಳಿದ ಇಬ್ಬರು ಬುರ್ಕಾಧಾರಿಗಳು ಕ್ಲಿನಿಕ್ ಕಡೆಗೆ ಹೋಗಿದ್ದಾರೆ. ಒಳಗೆ ಬಂದ ಅವರ ವಸ್ತ್ರ ಧಾರಣೆ ಕಂಡು ಸಿಬ್ಬಂದಿಗಳು ಸ್ವಲ್ಪ ಅನುಮಾನಗೊಂಡರು. ಚಿಕಿತ್ಸೆಗೆ ಚೀಟಿ ಮಾಡುವಂತೆ ಅವರಲ್ಲಿ ಹೇಳಿದರೂ ಇವರಿಬ್ಬರೂ ಮಹಿಳಾ ಡಾಕ್ಟರ್ ಇದ್ದ ಕಡೆಗೆ ನೇರವಾಗಿ ಹೋದರೆನ್ನಲಾಗಿದೆ. ಬುರ್ಕಾ ಹಾಕಿ ಮುಖ ಕೂಡ ಮುಚ್ಚಿದುದರಿಂದ ಗುರುತು ಸಿಗದೆ ಆತಂಕಗೊಂಡ ಡಾಕ್ಟರ್ ಹೊರಗೆ ಬಂದರೆಂದೂ ಆಗ ಉಳಿದ ಸಿಬ್ಬಂದಿಗಳೂ ಆತಂಕಗೊಂಡು ಹೊರಗೆ ಬಂದರೆಂದೂ ತಿಳಿದುಬಂದಿದೆ. ಸ್ಥಳದಲ್ಲಿ ಗೊಂದಲ ನಿರ್ಮಾಣವಾಯಿತು.
ಸಿಬ್ಬಂದಿಗಳ ಆತಂಕ ಕಂಡು ಪೇಟೆಯಲ್ಲಿದ್ದ ಜನರೂ ಅಲ್ಲಿಗೆ ದೌಡಾಯಿಸಿದ್ದಾರೆ. ಜನರು ಬಂದು ವಿಚಾರಿಸಿದಾಗ ಯುವಕರು ಮುಖಕ್ಕೆ ಹಾಕಿದ ಬುರ್ಕಾ ತೆಗೆದರು. ಆಗ ವೈದ್ಯರಿಗೆ ಗುರುತು ಸಿಕ್ಕಿತು. ” ನಾವು ಅವರ ತಮ್ಮಂದಿರು ಸರ್ಪೈಸ್ ಕೊಡುವ ಉದ್ದೇಶದಿಂದ ಬುರ್ಕಾ ಹಾಕಿಕೊಂಡು ಬಂದಿರುವುದಾಗಿ” ಇಬ್ಬರೂ ಹೇಳಿದ್ದಾರೆ. ಗೊಂದಲದ ಪರಿಸ್ಥಿತಿಗೆ ಕಾರಣವಾದ ಘಟನೆಗೆ ವೈದ್ಯರು ಜನರಲ್ಲಿ ಕ್ಷಮೆ ಕೇಳಿದರು.
ಸರ್ಪ್ರೈಸ್ ಕೊಡುವುದಿದ್ದರೆ ಮನೆಯಲ್ಲಿ ಕೊಡಲಿ, ಇದು ಯಾವ ಸೀಮೆಯ ಸರ್ಪ್ರೈಸ್, ಆಸ್ಪತ್ರೆ ಈ ರೀತಿ ವೇಷ ಮರೆಮಾಚಿಕೊಂಡು ಬರುವುದು ತಪ್ಪು, ಇವರೆಲ್ಲ ಯಾವಾಗ ಬುದ್ಧಿ ಕಲಿಯುತ್ತಾರೆ ಎಂದು ಸೇರಿದವರು ಮಾತನಾಡಿಕೊಳ್ಳುತ್ತಿದ್ದರು.