ಕರಾವಳಿ

ಸುಳ್ಯದ ಶ್ರೀಜಿತ್ ಮೃತಪಟ್ಟ ಪ್ರಕರಣ: ತಪ್ಪಿತಸ್ಥ ವೈದ್ಯರ ಬಂಧನಕ್ಕೆ ಆಗ್ರಹಿಸಿ ಪುತ್ತೂರಿನಲ್ಲಿ ಪ್ರತಿಭಟನೆ



ಪುತ್ತೂರು: ಇತ್ತೀಚಿಗೆ ಪುತ್ತೂರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷವೆಂದು ಆರೋಪಿಸಿ ವೈದ್ಯರನ್ನು ತಕ್ಷಣ ಬಂಧಿಸಬೇಕು ಮತ್ತು ಸರಕಾರದ ನೊಂದ ಕುಟುಂಬಕ್ಕೆ ರೂ. 25ಲಕ್ಷ ಪರಿಹಾರ ಕೊಡಿಸಬೇಕೆಂದು ಆಗ್ರಹಿಸಿ ದ.ಕ.ದಲಿತ್ ಸೇವಾ ಸಮಿತಿಯಿಂದ ಪುತ್ತೂರು ಕಿಲ್ಲೇ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.


ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ ಕೆಲವು ದಿನಗಳ ಹಿಂದೆ ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಹೊಟ್ಟೆ ನೋವೆಂದು ದಾಖಲಾದ ಸುಳ್ಯ ತಾಲೂಕಿನ ಶ್ರೀಜಿತ್ ಎಂಬ ಯುವಕನಿಗೆ ಸರ್ಜರಿ ಮಾಡಿದ ಸಮಯದಲ್ಲಿ ವೆಂಟಿಲೇಟರ್ ಇಲ್ಲದೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುವ ಸಮಯದಲ್ಲಿ ಶ್ರೀಜಿತ್ ಮೃತಪಟ್ಟಿದ್ದರು. ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಯುವಕನ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ಮಾಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ನಾವು ಯುವಕನ ಕುಟುಂಬಕ್ಕೆ ರೂ. 25ಲಕ್ಷ ಪರಿಹಾರ ಕೇಳಿ ತಹಶೀಲ್ದಾರ್‌ಗೆ ಮನವಿ ಮಾಡಿದ್ದೇವೆ. ತಹಶೀಲ್ದಾರ್ ಅದನ್ನು ಸಹಾಯಕ ಆಯುಕ್ತರಿಗೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಆದಷ್ಟು ಬೇಗ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನ್ಯಾಯಾಂಗ ಇಲಾಖೆ ಯುವಕನ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಅವರು ಒತ್ತಾಯಿಸಿದರು.



ಮಾದಿಗ ಸಮಾಜದ ರಾಜ್ಯ ಸಮಿತಿಯ ಖಜಾಂಚಿ ಮುನಿರಾಜು ಮಾತನಾಡಿ ಶ್ರೀಜಿತ್ ಸಾವಿಗೆ ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗೂ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ದಲಿತ್ ಸೇವಾ ಸಮಿತಿ ತಾಲೂಕು ಸಮಿತಿ ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಪ್ರತಿಭಟನೆಯಲ್ಲಿ ಮಾತನಾಡಿದರು. ಮೃತ ಶ್ರೀಜಿತ್ ಅವರ ಚಿಕ್ಕಪ್ಪ ಚಂದ್ರಶೇಖರ್, ಸಂಬಂಧಿಕೆ ಸುಮತಿ ಬೆಟ್ಟಂಪಾಡಿ, ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಸಮಿತಿಯ ಲೋಕೇಶ್ ತೆಂಕಿಲ, ತಾಲೂಕು ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!