ಪುತ್ತೂರು ಕಮ್ಯೂನಿಟಿ ಸೆಂಟರಿಗೆ ‘ನಮ್ಮ ನಾಡ ಒಕ್ಕೂಟ’ ಸಮಿತಿಯ ಪದಾಧಿಕಾರಿಗಳು ಭೇಟಿ
ನಮ್ಮ ನಾಡು ಒಕ್ಕೂಟದ ಕೇಂದ್ರ ಸಮೀತಿಯು ಇತ್ತೀಚೆಗೆ ಪುತ್ತೂರು ಕಮ್ಯೂನಿಟಿ ಸೆಂಟರಿಗೆ ಭೇಟಿ ನೀಡಿ ಸೆಂಟರಿನ ಶೈಕ್ಷಣಿಕ ಚಟುವಟಿಕೆಗಳ ಮಾದರಿ ಯೋಜನೆಯ ಅಧ್ಯಯನ ಮಾಡಿತು.
ಸುಮಾರು ಎರಡು ವರ್ಷಗಳ ಅವಧಿಯಲ್ಲಿ ವೈಜ್ಞಾನಿಕ ಪದ್ದತಿಯ ಮೂಲಕ ಕಮ್ಯೂನಿಟಿ ಸೆಂಟರ್ ಶೈಕ್ಷಣಿಕ ಉನ್ನತೀಕರಕ್ಕೆ ಶ್ರಮಿಸುತ್ತಿದ್ದು ಹಲವಾರು ಸ್ಪೂರ್ತಿದಾಯಕ ಕಥೆಗಳನ್ನು ವಿದ್ಯಾರ್ಥಿಗಳ ಬದುಕಿನಲ್ಲಿ ಸೃಷ್ಠಿಸಿದೆ. ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ, ಅಂಕಿ ಅಂಶ ಆಧಾರಿತ ಸ್ಟ್ರಾಟಜಿ, ಎಂಟನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳ ಮೌಲ್ಯಮಾಪನ, ಕೌನ್ಸಿಲಿಂಗ್, ಸಪೋರ್ಟ್ ಸಿಸ್ಟಂ ಮತ್ತು ಮೊನಿಟರಿಂಗ್ ಸಿಸ್ಟಂಗಳ ಮೂಲಕ ವಿದ್ಯಾರ್ಥಿಗಳಿಗೆ ಯಶಸ್ವಿ ವೃತ್ತಿ ಆಯ್ಕೆಗೆ ಸೆಂಟರ್ ಸಹಕರಿಸುತ್ತಿರುವುದನ್ನು ಅಧ್ಯಯನ ತಂಡವು ಮನವರಿಕೆ ಮಾಡಿತು.
ಇದೇ ಮಾದರಿಯಲ್ಲಿ ಉಡುಪಿ ಹಾಗೂ ಇತರ ತಾಲೂಕಿನಲ್ಲೂ ವಿದ್ಯಾರ್ಥಿಗಳಿಗೆ ಸದುಪಯೋಗ ಆಗುವ ಸೆಂಟರ್ ನಿರ್ಮಿಸಲು ಬೇಕಾದ ಪದ್ದತಿ ಮತ್ತು ಸಂಪನ್ಮೂಲಗಳ ಬಗ್ಗೆ ಸೆಂಟರಿನ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತೂರವರು ಸಮಗ್ರ ಮಾಹಿತಿ ನೀಡಿದರು.
ಈಗಾಗಲೇ ನಮ್ಮ ನಾಡ ಒಕ್ಕೂಟ ಉಡುಪಿಯಲ್ಲಿ ಸುಮಾರು 280 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಲ್ಲಿ ಕಮ್ಯೂನಿಟಿ ಸೆಂಟರಿನ ಕೌನ್ಸಿಲರ್ ಗಳು ಒಕ್ಕೂಟ ಯೋಜನೆಗೆ ಕೈ ಜೋಡಿಸಿದ್ದನ್ನು ಸ್ಮರಿಸಬಹುದು. ಈ 280 ವಿದ್ಯಾರ್ಥಿಗಳ ಮುಂದಿನ ನಾಲ್ಕರಿಂದ ಆರು ವರುಷಗಳ ವಿದ್ಯಾರ್ಥಿ ಜೀವನವನ್ನು ಮೊನಿಟರಿಂಗ್ ಮಾಡುವ ಮೂಲಕ ಸಮುದಾಯದ ಮಂದಿ ಉನ್ನತ ಹುದ್ದೆ ಅಲಂಕರಿಸುವತ್ತ ಕಮ್ಯೂನಿಟಿ ಸೆಂಟರ್ ಮತ್ತು ನಮ್ಮ ನಾಡ ಒಕ್ಕೂಟ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ.
ನಮ್ಮ ನಾಡ ಒಕ್ಕೂಟ ಎಲ್ಲಾ ಸಂಘ ಸಂಸ್ಥೆ ಮತ್ತು ಸೇವಾ ಕೇಂದ್ರಗಳ ಜೊತೆ ಕೈ ಜೋಡಿಸಿ ಸಮನ್ವಯ ಸಹಯೋಗ ಮಾಡಲು ಉದ್ದೇಶಿಸುತ್ತದೆ. ಪರಸ್ಪರ ಮಾದರಿಗಳ ಪರಿಚಯ, ಅನ್ವಯ ಮತ್ತು ಪ್ರಗತಿಗಾಗಿ ಜೊತೆಯಾಗಿ ದುಡಿಯಲು ಬಯಸುತ್ತದೆ. ಈಗಾಗಲೇ ಕಮ್ಯೂನಿಟಿ ಸೆಂಟರ್ ಪುತ್ತೂರಿನಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು ಇದು ಒಂದು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಪ್ರಯೋಗ ಎಂದು ಒಕ್ಕೂಟದ ಅಧ್ಯಯನ ತಂಡವು ಮನಗಂಡಿದೆ. ಶೈಕ್ಷಣಿಕ ಉನ್ನತೀಕರಣ ಮತ್ತು ಶಿಸ್ತಿಗೆ ಕಮ್ಯೂನಿಟಿ ಸೆಂಟರ್ ಅನುಸರಿಸುತ್ತಿರುವ ಮೆಥೆಡ್ ದೂರದೃಷ್ಠಿ ಹಾಗೂ ಫಲಿತಾಂಶ ಸೃಷ್ಠಿಸುವ ಸರಿಯಾದ ಕ್ರಮ ಎಂದು ಒಕ್ಕೂಟದ ತಂಡವು ಅಭಿಪ್ರಾಯ ಪಟ್ಟಿದ್ದು ಇದರ ಹಿಂದಿರುವ ಎಲ್ಲಾ ಕೊಡುಗೆದಾರರನ್ನು ಒಕ್ಕೂಟವು ಅಭಿನಂದಿಸಿ ಶ್ಲಾಘಿಸಿದೆ.
ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ, ಉಡುಪಿ ಜಿಲ್ಲಾ ಎನ್.ಎನ್.ಓ ಸದಸ್ಯರಾದ ಹುಸೈನ್, ಮುಸ್ತಫಾ ಮಲ್ಪೆ, ಅಬ್ದುಲ್ ಖಾದರ್ ಮೂಡುಗೋಪಾಡಿ, ತಾಲೂಕು ಸಮಿತಿಯ ಉಪಾಧ್ಯಾಕ್ಷ ಝಹೀರ್ ಅಹ್ಮದ್, ಬೈಂದೂರು ತಾಲೂಕು ಸದಸ್ಯ ಖಲೀಲ್ ಖಾಪ್ಸಿ ಅಧ್ಯಯನ ತಂಡದಲ್ಲಿದ್ದರು.