ಬಿಜೆಪಿ ನಾಯಕರಿಗೆ ಶ್ರದ್ದಾಂಜಲಿ ಸಲ್ಲಿಸಿ ಬ್ಯಾನರ್ ಅಳವಡಿಸಿದ ಪ್ರಕರಣ: ಬಂಧಿತ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ಆರೋಪ
ಪುತ್ತೂರು ಬಸ್ ನಿಲ್ದಾಣದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಪೋಟೋಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಚಪ್ಪಲಿ ಹಾರ ಹಾಕಿ ಬ್ಯಾನರ್ ಅಳವಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ದೌರ್ಜನ್ಯದ ಬಳಿಕದ್ದು ಎನ್ನಲಾದ ಫೋಟೋ, ವಿಡಿಯೋ ವೈರಲ್ ಆಗುತ್ತಿದೆ.

ಘಟನೆಗೆ ಸಂಬಂಧಿಸಿ ನರಿಮೊಗರು ಗ್ರಾಮದ ನಿವಾಸಿಗಳಾದ ವಿಶ್ವನಾಥ್, ಮಾಧವ, ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಅವರನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದು ಈ ವೇಳೆ ಅವರಿಗೆ ದೌರ್ಜನ್ಯ ನಡೆಸಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಗಾಯಗೊಂಡ ಯುವಕರ ಚಿತ್ರಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್ ಪಿ ಕಚೇರಿಯಿಂದ ನಡೆದಾಡಲೂ ಕಷ್ಟ ಪಡುವ ರೀತಿಯಲ್ಲಿ ಹೆಜ್ಜೆ ಹಾಕುತ್ತಿರುವ ಯುವಕರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆಚ್ಚಿನ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.